ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಆಚರಣೆಗಳಲ್ಲಿ ಹುಲಿ ಕುಣಿತಕ್ಕೆ ತನ್ನದೇ ಆದ ನಂಬಿಕೆ ಮತ್ತು ಪ್ರಾಮುಖ್ಯತೆ ಇದೆ.
ದಕ್ಷಿಣ ಕನ್ನಡ ಭಾಗದಲ್ಲಿ ನವರಾತ್ರಿ ಸಂದರ್ಭದಲ್ಲಿ ಹುಲಿ ಕುಣಿತ ಕಂಡುಬಂದರೆ, ಉಡುಪಿ ಭಾಗದಲ್ಲಿ ಅಷ್ಟಮಿ ಮತ್ತು ಅದರ ಮರುದಿನ ವಿಟ್ಲ ಪಿಂಡಿ ಸಂದರ್ಭದಲ್ಲಿ ಹುಲಿಗಳ ಅಬ್ಬರ ಜೋರಾಗಿರುತ್ತದೆ.
ಆದರೆ, ಈ ಹುಲಿ ವೇಷ ಹಾಕುವುದರ ಹಿಂದೆ ಒಂದು ನಂಬಿಕೆ ಇದೆ. ದೇವಿಯ ವಾಹನವೆಂದೇ ನಂಬುವ ಹುಲಿಯನ್ನು ಈ ಹುಲಿ ವೇಷಧಾರಿ ತಂಡದವರು ಆರಾಧಿಸಿ ಬಳಿಕವೇ ಹುಲಿ ವೇಷವನ್ನು ಹಾಕಿಕೊಳ್ಳುತ್ತಾರೆ.
ಕೆಲವರು ತಮ್ಮ ಆರೋಗ್ಯ ಸಮಸ್ಯೆಗಳ ನಿವಾರಣೆಗಾಗಿ ಹರಕೆ ಹೇಳಿಕೊಂಡು ಹುಲಿ ವೇಷ ಹಾಕುವುದೂ ಇದೆ. ಇನ್ನು ಹುಲಿ ವೇಷಕ್ಕೆ ತಮ್ಮ ಮೈಯನ್ನು ಒಡ್ಡುವ ಮುನ್ನ ಅಲ್ಲಿ ಕೆಲವು ದೈವಿಕ ಕ್ರಮಗಳನ್ನು ಪಾಲಿಸಲಾಗುತ್ತದೆ.
ಮತ್ತು ಹುಲಿ ವೇಷಧಾರಿ ನಿರ್ಧಿಷ್ಟ ವ್ರತಾಚರಣೆಯಲ್ಲೂ ಇರಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಮೊದಲ ಬಾರಿಗೆ ಹುಲಿ ವೇಷ ಹಾಕಿಕೊಳ್ಳುತ್ತಿರುವವರಲ್ಲಿ ಅವರ ದೇಹಕ್ಕೆ ಬಣ್ಣವನ್ನು ಬಲಿಯುವಾಗ ಕೆಲವೊಮ್ಮೆ ಅವರಲ್ಲಿ ಅಗೋಚರ ಶಕ್ತಿಯೊಂದು ಆವಾಹನೆಗೊಂಡು ಅವರು ಆವೇಶಕ್ಕೊಳಗಾಗುವುದು ಸಾಮಾನ್ಯವಾಗಿರುತ್ತದೆ.
ಸ್ಟೇಜ್ ಮೇಲೆ ಪ್ರದರ್ಶನ ನೀಡುತ್ತಿದ್ದ ಹುಲಿ ವೇಷಧಾರಿಯೊಬ್ಬರು ಆವೇಶಗೊಳ್ಳುವ ವಿಡಿಯೋ ಒಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉಡುಪಿಯ ನಿಟ್ಟೂರಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಹುಲಿ ತಂಡವೊಂದರ ಸದಸ್ಯ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲೇ ಅವರು ಆವೇಶಕ್ಕೊಳಗಾಗಿ ಅಲ್ಲಿದ್ದ ಮ್ಯಾಟ್ ಚೂರನ್ನು ಬಾಯಿಂದ ಹರಿದು, ತನ್ನ ಸಹ ವೇಷಧಾರಿಗಳು ಮತ್ತು ತಂಡದ ಇತರರಿಗೂ ಹಿಡಿಯಲು ಸಾಧ್ಯವಾಗದಿರುವ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ವಿಡಿಯೋ ಕೃಪೆ: Coastal King