ಸಿರುಗುಪ್ಪ: ಗಡಿನಾಡು ಹೊಳಗುಂದ ಮಂಡಲದ ದೇವರ ಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ನಸುಕಿನವರೆಗೆ ಮಾಳಮ್ಮ ಮಲ್ಲೇಶ್ವರ ಕಲ್ಯಾಣೋತ್ಸವ ನಡೆದಿದ್ದು, ಉತ್ಸವ ಮೂರ್ತಿಗಾಗಿ ನಡೆದ ಬಡಿಗೆ ಬಡಿದಾಟದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಡಿಗೆ ಬಡಿದಾಟವನ್ನು ನೋಡಲೆಂದು ಹತ್ತಾರು ಮಂದಿ ಮರ ಎರಿದ್ದರು. ಈ ಪೈಕಿ ಒಂದು ಕೊಂಬೆ ಮುರಿದು ಬಿದ್ದುದರಿಂದ ಮೂವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಅಸ್ಪರಿ ಗ್ರಾಮದ ಗಣೇಶ (19), ಮಲಗಲದಲ್ಲಿ ಕೊಟ್ಟಾಲು ಗ್ರಾಮದ ರಾಮಾಂಜನೇಯಲು (59) ಹಾಗೂ ಕರ್ನಾಟಕದ ಬಳ್ಳಾರಿಯ ಪ್ರಕಾಶ್ (3) ಎಂದು ಗುರುತಿಸಲಾಗಿದೆ ಎಂದು ಕರ್ನೂಲ್ ಎಸ್‌ಪಿ ಕೃಷ್ಣ ಕಾಂತ್ ತಿಳಿಸಿದ್ದಾರೆ.
ಬಡಿಗೆ ಬಡಿದಾಟ ಆಚರಣೆ: ಇಲ್ಲಿ ಬಡಿಗೆ ಬಡಿದಾಟ ನಡೆಯುವುದು ಒಂದು ಆಚರಣೆ. ಇದನ್ನು ನೋಡಲು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಬಡಿದಾಟದಲ್ಲಿ ಗಾಯಗೊಳ್ಳುವುದು. ಆಸ್ಪತ್ರೆಗೆ ದಾಖಲಿಸುವುದು ಇಲ್ಲಿ ಸಾಮಾನ್ಯವಾಗಿದ್ದು, ಈ ವರ್ಷ ಬಡಿಗೆ ಬಡಿದಾಟದಲ್ಲಿ ಸಾವು ಸಂಭವಿಸದಿದ್ದರೂ, ಮರ ಮುರಿದು ಬಿದ್ದುದರಿಂದ ಮೂವರ ಸಾವು ಸಂಭವಿಸಿದೆ.