main logo

ಎಮ್ಮೆ ಸಾಕಿ ಕೋಟಿಗಟ್ಟಲೇ ಕಮಾಯಿ ಮಾಡುವ ಈ ಮಾಡರ್ನ್‌ ಲೇಡಿ

ಎಮ್ಮೆ ಸಾಕಿ ಕೋಟಿಗಟ್ಟಲೇ ಕಮಾಯಿ ಮಾಡುವ ಈ ಮಾಡರ್ನ್‌ ಲೇಡಿ

ಮಕ್ಕಳು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಯೋದಕ್ಕಿಂತ ಕಷ್ಟಗಳನ್ನು ಎದುರಿಸಿ ಬೆಳೆದಾಗ ಏನಾದರೂ ಸಾಧಿಸುತ್ತಾರೆ ಅನ್ನೋದು ಅನುಭವಸ್ಥರ ಮಾತು. ಇದು ನಿಜ ಕೂಡ ಹೌದು. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬದಲ್ಲಿ ಬೆಳೆದ ಅದೆಷ್ಟೋ ಮಕ್ಕಳು ಮುಂದೆ ಉನ್ನತ ಸಾಧನೆ ಮಾಡಿದ ಸಾಕಷ್ಟು ನಿದರ್ಶನಗಳು ನಮ್ಮ ಸುತ್ತಮುತ್ತಲು ಸಿಗುತ್ತವೆ. ಹೆತ್ತವರ ಕಷ್ಟ ಮಕ್ಕಳಿಗೆ ಅರಿವಾದರೆ ಅವರಲ್ಲೂ ಸಾಧಿಸುವ ಛಲ ಹುಟ್ಟೋದು ಸಹಜ. ಮಹಾರಾಷ್ಟ್ರದಲ್ಲಿ ಇಂಥ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ಯುವತಿಯೊಬ್ಬಳು ಸ್ವಂತ ಉದ್ಯಮದ ಮೂಲಕ ಇಂದು ಗಮನ ಸೆಳೆದಿರುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ ಕೂಡ. ಅವರೇ ಮಹಾರಾಷ್ಟ್ರ ಅಹ್ಮೆದ್ ನಗರ ಜಿಲ್ಲೆಯ ನಿಘೋಜ್ ಹಳ್ಳಿಯ ಶ್ರದ್ಧಾ ಧವನ್. ಅಂಗ ವೈಕಲ್ಯ ಹೊಂದಿದ್ದ ತಂದೆಗೆ ಬಾಲ್ಯದಿಂದಲೇ ಎಮ್ಮೆ ಸಾಕಣೆ ಹಾಗೂ ಅದರ ಹಾಲು ಮಾರಾಟಕ್ಕೆ ನೆರವು ನೀಡಲು ಪ್ರಾರಂಭಿಸಿದ ಶ್ರದ್ಧಾ ಮುಂದೆ ಈ ಉದ್ಯಮವನ್ನೇ ದೊಡ್ಡ ಮಟ್ಟಕ್ಕೆ ವಿಸ್ತರಿಸುವ ಮೂಲಕ ಒಂದು ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ.

ಶ್ರದ್ಧಾ ಧವನ್ ತಮ್ಮ 11ನೇ ವಯಸ್ಸಿನಲ್ಲೇ ತಂದೆ ಸತ್ಯವನ್ ಅವರಿಗೆ ಎಮ್ಮೆಗಳ ಸಾಕಣೆ ಹಾಗೂ ಹಾಲು ಮಾರಾಟದಲ್ಲಿ ನೆರವು ನೀಡಲು ಪ್ರಾರಂಭಿಸಿದ್ದರು. ಸತ್ಯವನ್ ಅಂಗವೈಕಲ್ಯ ಹೊಂದಿದ್ದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆಗೆ ವ್ಯಾಪಾರದಲ್ಲಿ ನೆರವು ನೀಡಲು ಪ್ರಾರಂಭಿಸಿದರು. ಹೀಗೆ ತಂದೆಯ ಜೊತೆಗೆ ಎಮ್ಮೆ ಸಾಕಣೆ ಹಾಗೂ ಮಾರಾಟದ ಉದ್ಯಮದಲ್ಲಿ ತೊಡಗಿಕೊಂಡ ಕಾರಣ ಅವರಿಗೆ ವ್ಯಾಪಾರದ ಉದ್ದಗಲ ಬಹುಬೇಗ ಅರ್ಥವಾಯಿತು. ಹಾಲು ಮಾರಾಟದ ಸಮಯದಲ್ಲಿ ಗ್ರಾಹಕರ ಜೊತೆಗೆ ಹೇಗೆ ಚರ್ಚೆ ನಡೆಸಬೇಕು, ಎಮ್ಮೆಗೆ ಯಾವ ಆಹಾರ ನೀಡಬೇಕು, ಅದರ ಪೋಷಣೆ ಹೇಗೆ ಮಾಡಬೇಕು ಮುಂತಾದ ವಿಷಯಗಳಲ್ಲಿ ಶ್ರದ್ಧಾಗೆ ಸಾಕಷ್ಟು ಅನುಭವ ದೊರಕಿತು. 13-14ನೇ ವಯಸ್ಸಿನಲ್ಲೇ ಈ ಎಲ್ಲ ಕೆಲಸಗಳನ್ನು ಮಾಡಲು ಶ್ರದ್ಧಾ ಕಲಿತಿದ್ದರು.

ಭೌತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದ ಬಳಿಕ ಶ್ರದ್ಧಾ ಬೇರೆ ಯಾವ ಉದ್ಯೋಗವನ್ನು ಕೂಡ ಅರಸಿ ಹೋಗದೆ ತಂದೆಯ ಎಮ್ಮೆ ಸಾಕಾಣೆ, ಮಾರಾಟ ಹಾಗೂ ಹಾಲು ಮಾರಾಟದ ಉದ್ಯಮವನ್ನೇ ಬೆಳೆಸುವ ನಿರ್ಧಾರ ಕೈಗೊಳ್ಳುತ್ತಾರೆ. ಸತತ ಪರಿಶ್ರಮ, ಬದ್ಧತೆ ಹಾಗೂ ಸೂಕ್ತ ಯೋಜನೆಗಳ ಮೂಲಕ ಶ್ರದ್ಧಾ ತಂದೆಯ ಪುಟ್ಟ ಉದ್ಯಮವನ್ನು ಇಂದು 1 ಕೋಟಿ ರೂ. ಮೌಲ್ಯದ ಉದ್ಯಮವನ್ನಾಗಿ ಬದಲಾಯಿಸಿದ್ದಾರೆ.ನಿಘೋಜ್ ಹಳ್ಳಿಯಲ್ಲಿರುವ ಶ್ರದ್ಧಾ ಫಾರ್ಮ್ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ.

ತಂದೆಯ 2 ಎಮ್ಮೆಗಳ ಹಟ್ಟಿ ಇಂದು 80 ಎಮ್ಮೆಗಳಿಗೆ ಆಶ್ರಯ ನೀಡುತ್ತಿದೆ. ಶ್ರದ್ಧಾ ಅವರ ತಂದೆ ಎಮ್ಮೆಗಳ ಮಾರಾಟಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದರೆ, ಶ್ರದ್ಧಾ ಇದನ್ನು ಡೈರಿ ಫಾರ್ಮ್ ಆಗಿ ಬದಲಾಯಿಸಿದರು. ಇದನ್ನು ಸೂಕ್ತ ಯೋಜನೆ ಮೂಲಕ ಮಾಡಿದ ಕಾರಣಕ್ಕೆ ಎಮ್ಮೆ ಹಾಲಿನ ಮಾರಾಟ ಹೆಚ್ಚಿ ಕುಟುಂಬದ ಆರ್ಥಿಕ ಪರಿಸ್ಥಿತಿ ಬದಲಾಯಿತು. ಲಾಭದ ಹಣವನ್ನು ಬೇರೆ ಎಲ್ಲೂ ಬಳಸದೆ ಮತ್ತೆ ಉದ್ಯಮದಲ್ಲಿ ತೊಡಗಿಸಿದ ಕಾರಣ ಶ್ರದ್ಧಾಗೆ ಸಾಲ ಮಾಡುವ ಅನಿವಾರ್ಯತೆ ಎದುರಾಗಲಿಲ್ಲ.

2016ರಲ್ಲಿ ದೊಡ್ಡ ಶೆಡ್ ಕಟ್ಟಿ ಎಮ್ಮೆಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಿದರು. 2017ರಲ್ಲಿ ಎಮ್ಮೆಗಳ ಸಂಖ್ಯೆ 45ಕ್ಕೆ ಏರಿಕೆಯಾಯಿತು. ಆ ಬಳಿಕ ಶ್ರದ್ಧಾ ಹಾಲಿನ ಗುಣಮಟ್ಟ ಹೆಚ್ಚಿಸುವ ಕಡೆಗೆ ಗಮನ ನೀಡಿದರು. ಇದಕ್ಕಾಗಿ ಅವರು ಹತ್ತಿಬೀಜದ ಹಿಂಡಿ, ಜೋಳ, ಜೋಳದ ಪುಡಿ ಹಾಗೂ ಮೆಂತೆ ಹಲ್ಲು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಲು ಪ್ರಾರಂಭಿಸಿದರು. ಇದರಿಂದ ಹಾಲಿನ ಗುಣಮಟ್ಟ ಹೆಚ್ಚುವ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕೂಡ ಹೆಚ್ಚಾಯಿತು.

ಮೂರು ವರ್ಷಗಳ ಹಿಂದೆ ಕಂಪೋಸ್ಟಿಂಗ್ ಗೊಬ್ಬರ ತಯಾರಿಕೆ ಉದ್ಯಮವನ್ನು ಕೂಡ ಶ್ರದ್ಧಾ ಪ್ರಾರಂಭಿಸಿದರು. ಪ್ರತಿ ತಿಂಗಳು ಅಂದಾಜು 30,000 ಕೆಜಿ ಕಂಪೋಸ್ಟ್ ಗೊಬ್ಬರ ಸಿದ್ಧಪಡಿಸಿ ‘ಸಿಎಸ್ ಅಗ್ರೋ ಆರ್ಗನಿಕ್ಸ್’ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಳೆದ ಆರ್ಥಿಕ ಸಾಲಿನಲ್ಲಿ ಶ್ರದ್ಧಾ ಅವರು ಡೈರಿ ಫಾರ್ಮ್, ಕಂಪೋಸ್ಟ್ ಗೊಬ್ಬರ ಹಾಗೂ ತರಬೇತಿ ನೀಡುವ ಉದ್ಯಮಗಳ ಮೂಲಕ ಒಟ್ಟು 1 ಕೋಟಿ ರೂ. ಆದಾಯ ಗಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!