ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ಭಾರೀ ಸಂಖ್ಯೆಯ ಕೇಸರಿ ಕಾರ್ಯಕರ್ತರ ಹೆದ್ದೆರೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗ್ಗೆ ಶರವು, ಕುದ್ರೋಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಂಟ್ಸ್ ಹಾಸ್ಟೆಲ್ ಚುನಾವಣಾ ಕಚೇರಿ ಮುಂಭಾಗದಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರನ್ನು ನೋಡಿ ಕೈಮುಗಿಯುತ್ತಲೇ ತೆರೆದ ವಾಹನಕ್ಕೇರಿದರು. ಸಂಸದ ನಳಿನ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ಪುತ್ತೂರಿನ ರೆಬೆಲ್ ಸ್ಟಾರ್ ಅರುಣ್ ಪುತ್ತಿಲ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ರಾಜೇಶ್ ನಾಯ್ಕ್ ತೆರೆದ ವಾಹನದಲ್ಲಿ ಅಭ್ಯರ್ಥಿ ಬೃಜೇಶ್ ಚೌಟರಿಗೆ ಸಾಥ್ ನೀಡಿದರು.
ಭಾರೀ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಬಿಜೆಪಿಗೆ ಜೈಕಾರ, ಮೋದಿಗೆ ಜೈಕಾರ ಕೂಗುತ್ತಲೇ ಅಂಬೇಡ್ಕರ್ ವೃತ್ತ, ಹಂಪನಕಟ್ಟೆ ಮೂಲಕ ಕ್ಲಾಕ್ ಟವರ್ ರಸ್ತೆಯಾಗಿ ಪುರಭವನದ ಮುಂಭಾಗದಲ್ಲಿ ಸೇರಿದರು. ವಿಶೇಷ ಅಂದ್ರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿವಿ ಅವರೂ ಕಾರ್ಯಕರ್ತರ ಜೊತೆಗೆ ಕಾಲ್ನಡಿಗೆಯಲ್ಲಿ ಸಾಗಿಬಂದರು. ಆನಂತರ, ಮೆರವಣಿಗೆಯ ವಾಹನಕ್ಕೆ ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರೂ ಜೊತೆಯಾದರು.
ಸಮಾವೇಶದಲ್ಲಿ ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ನಿಮ್ಮ ವಿಶ್ವಾಸಕ್ಕೆ ಕುಂದು ಬರದಂತೆ ಪ್ರಧಾನಿ ಮೋದಿಯವರ ವಿಕಸಿತ ಭಾರತದ ಕಲ್ಪನೆ ಸಾಕಾರಗೊಳಿಸಲು ಪ್ರಯತ್ನಿಸುತ್ತೇನೆ. ನಿಮ್ಮೆಲ್ಲರ ಆಶಯದಂತೆ ಹಿಂದುತ್ವದ ಭದ್ರಕೋಟೆಯನ್ನು ಉಳಿಸಿಕೊಳ್ಳೋಣ. ಅತಿ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡರು. ಸಭೆಯ ನಡುವೆಯೇ ಸಂಸದ ನಳಿನ್ ಕುಮಾರ್ ಮತ್ತು ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಜೊತೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಅಂದಾಜು ಹತ್ತು ಸಾವಿರದಷ್ಟು ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಸೇರಿದ್ದಲ್ಲದೆ, ಹಿಂದುತ್ವ, ಕೇಸರಿ ಕೋಟೆಯ ಪರವಾಗಿ ಜೈಕಾರ ಹಾಕಿದರು. ಮಹಿಳಾ ಕಾರ್ಯಕರ್ತರು ಗೆಲ್ಲುವಿರಿ ಕ್ಯಾಪ್ಟನ್ ನೀವು ಎಂಬ ಹಾಡಿಗೆ ತಮ್ಮ ಕೇಸರಿ ಶಾಲನ್ನು ತಲೆಯ ಮೇಲಿನಿಂದ ಬೀಸುತ್ತಲೇ ಹೆಜ್ಜೆ ಹಾಕಿದರು.
ಬಿಜೆಪಿಗರಿಗೆ ಜೆಡಿಎಸ್ ಮುಖಂಡರ ಸಾಥ್