ಬಂಟ್ವಾಳ: ಕಳೆದ ಕೆಲ ದಿನಗಳ ಹಿಂದೆ ಬೀಚ್ ನಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಕುರಿತು ಪೊಲೀಸ್ ಕೇಸ್ ದಾಖಲಾಗಿತ್ತು. ಅದೇ ರೀತಿ ಬಿ.ಸಿ ರೋಡ್ ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪ ಎದುರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಮೊದಲು ಬಂಟ್ವಾಳ ಡಿವೈಎಸ್ ಪಿ ಕಚೇರಿಯಲ್ಲಿ ಸಿಬ್ಬಂದಿಯಾಗಿದ್ದು, ಪ್ರಸ್ತುತ ಎನ್ ಐಎ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ, ಮಂಜುನಾಥ್ ಆಚಾರ್ಯ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 27 ರಂದು ಪೊಲೀಸ್ ಸಿಬ್ಬಂದಿ ಪತ್ನಿ ಹಾಗೂ ಪತ್ನಿಯ ಅಕ್ಕನ ಜೊತೆ ಬಿಸಿರೋಡಿನ ವಸತಿ ಗೃಹದಲ್ಲಿ ತಂಗಿದ್ದು, ರಾತ್ರಿ ವೇಳೆ ಊಟಕ್ಕೆ ಬಿಸಿರೋಡಿನ ಹೋಟೆಲ್ ಒಂದಕ್ಕೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಪೊಲೀಸ್ ಸಿಬ್ಬಂದಿ ಕುಟುಂಬವನ್ನು ಹಿಂಬಾಲಿಸಿಕೊಂಡು ಬಂದು ಅವ್ಯಾಚ್ಯವಾಗಿ ನಿಂದಿಸಿದ್ದಾರೆ. ನೀನು ಮುಸ್ಲಿಂ, ಹಿಂದೂ ಹುಡುಗಿಯರನ್ನು ಎಲ್ಲಿ ಕರೆದು ಕೊಂಡು ಹೋಗಿದ್ದೀಯಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಪೊಲೀಸ್ ಎಂದು ತಿಳಿಸಿದರೂ ಲೆಕ್ಕಿಸಿದೇ ಹಲ್ಲೆಗೂ ಮುಂದಾಗಿದ್ದಾರೆ. ಅಲ್ಲದೇ ಪೊಲೀಸ್ ಸಿಬ್ಬಂದಿ ಪತ್ನಿಯ ಚಿತ್ರೀಕರಣ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದು, ತನಿಖೆ ಮುಂದುವರಿದಿದೆ.