ಮಂಗಳೂರು: ಇಸ್ರೇಲ್ನಲ್ಲಿ ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ಆರೋಪಿ ಜಾಕೀರ್ ವಿರುದ್ಧ ಮಂಗಳೂರು ಉತ್ತರ ಪೊಲೀಸರು ಸ್ವಯಂ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆಯೇ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಏಳು ಪ್ರಕರಣ ದಾಖಲಾಗಿವೆ. ಮಂಗಳೂರಿನ ಬಂದರಿನ ಜಿ.ಎಂ ರಸ್ತೆಯ ನಿವಾಸಿಯಾಗಿರುವ ಜಾಕೀರ್, ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ. ಹಮಾಸ್ ಉಗ್ರರರನ್ನು ದೇಶ ಪ್ರೇಮಿಗಳೆಂದು ಕರೆದಿದ್ದ. ಪ್ಯಾಲೆಸ್ತೀನ್, ಗಾಜಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದ.
ಹಮಾಸ್ ಉಗ್ರರನ್ನು ದೇಶ ಪ್ರೇಮಿ ಯೋಧರೆಂದು ಬಣ್ಣಿಸಿದ್ದ. ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡಿದ್ದ. ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂಬ ಹೆಸರಿನಲ್ಲಿ ಜಾಕಿರ್ ಗುರುತಿಸಿಕೊಂಡಿದ್ದ. ಜಾಕೀರ್ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.