main logo

ಛಿ ಕಳ್ಳ…!: ಎಮ್ಮೆ ಎಗರಿಸಿದವ 58 ವರ್ಷಗಳ ಬಳಿಕ ಅರೆಸ್ಟ್‌!

ಛಿ ಕಳ್ಳ…!: ಎಮ್ಮೆ ಎಗರಿಸಿದವ 58 ವರ್ಷಗಳ ಬಳಿಕ ಅರೆಸ್ಟ್‌!

ಬೀದರ್‌: ವಿಚಿತ್ರ ಪ್ರಕರಣವೊಂದರಲ್ಲಿ ಎಮ್ಮೆ ಕಳ್ಳತನ ಮಾಡಿದ ಆರೋಪಿಯನ್ನು 58 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ! ಹೌದು, 1965ರಲ್ಲಿ ನಡೆದ ಎಮ್ಮೆ ಕಳ್ಳತನ ಪ್ರಕರಣದ ಆರೋಪಿಯನ್ನು 2023ರಲ್ಲಿ ಬಂಧಿಸಲಾಗಿದೆ.

58 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಹೆಸರು, ಲಾಂಗ್ ಪೆಂಡಿಂಗ್ ರಿಪೋರ್ಟ್‌ಗೆ (LPR) ಸೇರಿ ಹೋಗಿತ್ತು. ಪ್ರಕರಣ ದಾಖಲಾಗಿ, ಜಾಮೀನು ದೊರೆತ ಬಳಿಕ ಆರೋಪಿಯು ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ.

ಸಮನ್ಸ್ ನೋಟಿಸ್, ವಾರೆಂಟ್ ನೀಡಿದ್ದರೂ ಕ್ಯಾರೆ ಎಂದಿರಲಿಲ್ಲ. ಹೀಗಾಗಿ, ಈ ಪ್ರಕರಣವನ್ನು ಮಹೆಕರ್ ಠಾಣೆಯ ಪೊಲೀಸರು ನಿಶ್ಚಲ ಕಡತಕ್ಕೆ ಸೇರಿಸಿದ್ದರು. ಬೀದ‌ರ್‌ ಎಸ್‌ಪಿ ಚನ್ನಬಸವಣ್ಣ ಎಸ್‌ಎಲ್ ಅವರು ಇಂತಹ ಎಲ್‌ಪಿಆರ್ ಪ್ರಕರಣಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಆ ತಂಡ ಆರೋಪಿಯನ್ನು ಬಂಧಿಸಿದೆ.

1965ರಲ್ಲಿ ಎಮ್ಮೆ ಎಗರಿಸಿದ್ದ: 1965ರ ಏಪ್ರಿಲ್ 25ರಂದು ಮೆಹಕರ್‌ನಲ್ಲಿ 2 ಎಮ್ಮೆ 1 ಕರು ಕಳುವಾದ ಕುರಿತು ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಎನ್ನುವವರು ಮೆಹಕರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.

ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಿಠಲ ವಾಗೋರೆ (20) ಎನ್ನುವವರು ಕಳ್ಳತನ ಮಾಡಿದ್ದರು. ಇವರನ್ನು 1965ರಲ್ಲೇ ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದ ಬಳಿಕ ಈ ಆರೋಪಿಗಳು ಕೋರ್ಟ್‌ಗೆ ಬಾರದೇ ತಲೆ ಮರೆಸಿಕೊಂಡಿದ್ದರು.

ಸಮನ್ಸ್, ವಾರಂಟ್ ಜಾರಿ ಮಾಡಿದ್ದರೂ ಬಾರದೇ ತಲೆ ಮರೆಸಿಕೊಂಡಿದ್ದರು. ಈ ಪೈಕಿ ಮೊದಲ ಆರೋಪಿ ಕಿಶನ್ ಚಂದರ್ 2006 ಏಪ್ರಿಲ್ 11ರಂದು ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಯಿತು. ಮೆಹಕರ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಕುಮಾರ, ಚಂದ್ರಶೇಖರ, ಎಎಸ್‌ಐ ಅಂಬಾದಾಸ ಅವರ ತಂಡವು ತನಿಖೆ ನಡೆಸಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್‌ನಲ್ಲಿ ಪತ್ತೆ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

error: Content is protected !!