main logo

ಭಾರತದಲ್ಲಿ ಹಿಂದುಗಳ ಸಂಖ್ಯೆ 8 ಶೇ. ಕುಸಿತ, ಮುಸ್ಲಿಮರ ಜನಸಂಖ್ಯೆ 43 ಶೇ. ಏರಿಕೆ, ಅಮೆರಿಕ, ಯುಕೆಯಲ್ಲಿ ಕ್ರೈಸ್ತರ ಸಂಖ್ಯೆಯೂ ಇಳಿಕೆ ; ಆರ್ಥಿಕ ಸಲಹಾ ಮಂಡಳಿ ವರದಿ

ಭಾರತದಲ್ಲಿ ಹಿಂದುಗಳ ಸಂಖ್ಯೆ 8 ಶೇ. ಕುಸಿತ, ಮುಸ್ಲಿಮರ ಜನಸಂಖ್ಯೆ 43 ಶೇ. ಏರಿಕೆ, ಅಮೆರಿಕ, ಯುಕೆಯಲ್ಲಿ ಕ್ರೈಸ್ತರ ಸಂಖ್ಯೆಯೂ ಇಳಿಕೆ ; ಆರ್ಥಿಕ ಸಲಹಾ ಮಂಡಳಿ ವರದಿ

ನವದೆಹಲಿ: ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಜನಸಂಖ್ಯೆ ಕುಸಿತವಾಗುತ್ತಿದ್ದು ಇದೇ ವೇಳೆ ಮುಸ್ಲಿಮರ ಸಂಖ್ಯೆ ಹೆಚ್ಚುತ್ತಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ, ಭಾರತ ಮತ್ತು ನೆರೆ ರಾಷ್ಟ್ರಗಳಲ್ಲಿ ಧರ್ಮದ ಆಧಾರದಲ್ಲಿ ಜನಸಂಖ್ಯೆ ಹೆಚ್ಚಳ ಆಗಿರುವ ವರದಿಯನ್ನು ಪ್ರಕಟಿಸಿದೆ.

 

1950 ಮತ್ತು 2015ರ ನಡುವೆ 167 ದೇಶಗಳಲ್ಲಿರುವ ಧರ್ಮಗಳನ್ನು ಅಧ್ಯಯನ ಮಾಡಿ ಜನಸಂಖ್ಯಾ ಹೆಚ್ಚಳ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ಈ ವರದಿ ಮತ್ತೊಂದು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.

 

1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ, ಇದೇ ಸಂದರ್ಭದಲ್ಲಿ ಮುಸ್ಲಿಮರ ಪ್ರಮಾಣ 43% ಏರಿಕೆಯಾಗಿದೆ. 1950ರಲ್ಲಿ ಶೇ. 84.68 ಹಿಂದೂಗಳಿದ್ದರೆ ಈಗ ಅದು ಶೇ. 78.06 ಕ್ಕೆ ಇಳಿಕೆಯಾಗಿದೆ. ಮುಸ್ಲಿಮ್‌ ಜನಸಂಖ್ಯೆ ಶೇ. 9.84% ಇದ್ದುದು ಈಗ ಶೇ. 14.09 ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್‌ ಜನಾಂಗವರ ಸಂಖ್ಯೆ ಹೆಚ್ಚಳವಾಗಿದೆ. ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿರುವುದನ್ನು ವರದಿ ಹೇಳಿದೆ.

 

ಕೈಸ್ತರು 5.38 ಶೇ., ಸಿಖ್‌ 6.58 ಶೇ., ಬೌದ್ಧ 0.81 ಶೇ. ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36 ರಷ್ಟು ಏರಿಕೆಯಾಗಿದೆ. ಜೈನರ ಸಂಖ್ಯೆ 1950ರಲ್ಲಿ 0.45 ಶೇ. ಇದ್ದರೆ, 2015ರಲ್ಲಿ 0.36 ಶೇ.ಕ್ಕೆ ಇಳಿಕೆಯಾಗಿದೆ. ಪಾರ್ಸಿ ಜನಾಂಗದ ಸಂಖ್ಯೆ 85 ಶೇ.ದಷ್ಟು ಇಳಿಕೆಯಾಗಿದ್ದು 0.03 ಶೇ. ಇದ್ದುದು 0.004% ಕ್ಕೆ ಇಳಿದಿದೆ.

 

ಭಾರತದ ರೀತಿಯಲ್ಲೇ ಮ್ಯಾನ್ಮಾರ್ ನಲ್ಲಿಯೂ ಬುದ್ಧರ ಜನಸಂಖ್ಯೆ ಪ್ರಮಾಣ ಹತ್ತು ಪರ್ಸೆಂಟ್ ಇಳಿಕೆಯಾಗಿದೆ.‌ ಅಲ್ಲಿ 79 ಪರ್ಸೆಂಟ್ ಇದ್ದ ಬುದ್ಧರ ಸಂಖ್ಯೆ 71 ಶೇ.ಕ್ಕೆ ಇಳಿದಿದೆ. ಪಾಕಿಸ್ತಾನದಲ್ಲಿ ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ 3.75 ಶೇ., ಬಾಂಗ್ಲಾದೇಶದಲ್ಲಿ 18.55 ಶೇ. ಹೆಚ್ಚಳವಾಗಿದೆ. ಇದೇ ವೇಳೆ, ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80 ಶೇ.ಕ್ಕೆ ಕ್ರೈಸ್ತರ ಸಂಖ್ಯೆ ಇಳಿಕೆಯಾಗಿರುವುದನ್ನೂ ವರದಿ ಹೇಳಿದೆ.

 

ಡಾ.ಶಮಿಕಾ ರವಿ, ಅಬ್ರಹಾಂ ಜೋಸ್, ಅಪೂರ್ವ ಕುಮಾರ್ ಮಿಶ್ರಾ ಅವರಿದ್ದ ತಂಡವು ಈ ಅಧ್ಯಯನ ವರದಿಯನ್ನು ರೆಡಿ ಮಾಡಿದೆ. ಮುಸ್ಲಿಂ ಬಹುಸಂಖ್ಯಾತರಿಲ್ಲದ ಭಾರತ, ಟಿಬೆಟ್, ಮ್ಯಾನ್ಮಾರ್ ನಲ್ಲಿ ಬಹುಸಂಖ್ಯಾತರ ಜನಸಂಖ್ಯೆ ಕಡಿಮೆಯಾಗುತ್ತಿದ್ದರೆ, ಮುಸ್ಲಿಂ ದೇಶಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದನ್ನು ವರದಿಯಲ್ಲಿ ತೋರಿಸಿದ್ದಾರೆ. ಜಾಗತಿಕವಾಗಿಯೂ ಮುಂಚೂಣಿ ದೇಶಗಳಲ್ಲಿ ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!