‘ಎರಡು ಜಡೆ ಸೇರಿದಲ್ಲಿ ಕಲಹ’, ‘ಹೆಂಗಸರ ನಾಲಿಗೆ ಉದ್ದ’, ‘ಗುಟ್ಟು ಮುಚ್ಚಿಟ್ಟ ಮಹಿಳೆಯಿಲ್ಲ’ ಇತ್ಯಾದಿ ಹೆಣ್ಮಕ್ಕಳ ಕುರಿತಾದ ಹಾಸ್ಯವನ್ನು ನಿತ್ಯ ಕೇಳುತ್ತೇವೆಯಷ್ಟೇ ಅಲ್ಲದೆ ಸಾಮಾನ್ಯವಾಗಿ ತಮಾಷೆಯ ಪ್ರಸಂಗ ಅಥವಾ ಬರೆಹಗಳನ್ನು ಗಮನಿಸಿ, ದಾಂಪತ್ಯ ಕುರಿತಾಗಿಯಿದ್ದರೆ ಅಲ್ಲಿ ಹೆಂಡತಿಯನ್ನೂ ಪ್ರೇಮಿಗಳ ಬಗ್ಗೆಯಿದ್ದರೆ ಪ್ರೇಯಸಿಯನ್ನೂ ಖಳನಾಯಕಿಯಂತೆ ಚಿತ್ರಿಸುವುದು ನೋಡುತ್ತೇವೆ. ಆದರೆ ವಾಸ್ತವದಲ್ಲಿ ಹಾಗೆ ನಡೆಯುವುದೇ ಎಂದು ಕೇಳಿದರೆ ಬರೆದವರನ್ನೂ ಸೇರಿಸಿ ಕೊಡುವ ಉತ್ತರ ಇಲ್ಲವೆನ್ನುವುದೇ ಹೊರತು ಹೌದೆಂದು ಒಪ್ಪಿಕೊಳ್ಳುವವರು ಯಾರೂ ಇಲ್ಲ. ಇದು ಯಾರದ್ದೋ ಒಬ್ಬರದ್ದಲ್ಲ ಮನೆ ಮನೆ ಕತೆ. ಹಾಸ್ಯಕ್ಕೂ ಗಂಭೀರ ಬರೆಹಕ್ಕೂ ಕತೆಗೂ ಕವಿತೆಗೂ ಸುಲಭವಾಗಿ ದಕ್ಕಿಸಿಕೊಳ್ಳಬಹುದಾದ ಹೆಣ್ಣು ನೋಡಿದಷ್ಟು ಸರಳವಲ್ಲ, ಸಲೀಸಾಗಿ ಪದಗಳಿಗೆ ಸಿಲುಕುವವಳಲ್ಲ.
ನಾಲ್ಕು ಗೋಡೆಗಳ ಮಧ್ಯೆ ಇರುವುದಷ್ಟೇ ತನ್ನ ಪ್ರಪಂಚವೆಂದು ಭಾವಿಸುವ ಕಾಲದಿಂದ ಹೆಣ್ಣು ಬಹಳಷ್ಟು ಮುಂದೆ ಬಂದು ನಿಂತಿದ್ದಾಳೆ. ಗೋಡೆಗಳ ಚೌಕಟ್ಟಿನಿಂದ ದಾಟಿ ನಿಂತ ಹೆಣ್ಣಿನ ಮೇಲೆ ಈಗೆಂತಹ ಶೋಷಣೆಯೆಂದು ಕೇಳಿದರೆ ಅಂದು ಗೋಡೆಗಳೊಳಗೆ ಅನುಭವಿಸಿ ಕುಗ್ಗಿ ಹೋಗುತ್ತಿರುವ ಕಾಲದಿಂದ ಜಗಜ್ಜಾಹೀರಾಗಿ ವಿಶ್ವವ್ಯಾಪಿಯಾಗಿ ತೆರೆದಿಡುವಂತಿದ್ದರೂ ಅನ್ಯಾಯ ನಡೆದಾಗ ಕೇಳಿ ಬರುವ ಮಾತೊಂದೇ ‘ಛೇ! ಹೆಣ್ಣಾಗಿ ಹೀಗಾಗಬಾರದಿತ್ತು’ ಎನ್ನುವುದಷ್ಟೇ. ಇಂತಹ ಒಂದು ಅನುಕಂಪಗಳೇ ಆಕೆಯನ್ನು ಮತ್ತಷ್ಟು ಸಂಕುಚಿಸುವುದರಿಂದಲೇ ಅವಳು ಮುಕ್ತವಾಗಿ ತನ್ನೊಳಗನ್ನು ತೆರೆದಿಡಲು ಸೋಲುತ್ತಿದ್ದಾಳೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಲಿಂಗ ಸಮಾನತೆ, ಸೂಕ್ಷ್ಮತೆಗಳ ಬಗ್ಗೆ ಪ್ರತಿದಿನ ಚರ್ಚೆಗಳು ನಡೆಯುತ್ತಲೇ ಇದ್ದರೂ ವಿದ್ಯಾವಂತ ಸಮಾಜದಲ್ಲಿ ಅಸಮಾನತೆ ಸಂಪೂರ್ಣವಾಗಿ ತೊಲಗಿದೆಯೇ ಎಂದರೆ ಇಲ್ಲವೆಂಬ ಕೂಗು ಕೇಳಿಬರುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಹುಡುಕಹೊರಟರೆ ನಮ್ಮ ನಿಮ್ಮ ಮನೆಯಂಗಳವೇ ಎಂಬ ಉತ್ತರವನ್ನು ನಾವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಹೆಣ್ಮಕ್ಕಳನ್ನು ಎಷ್ಟೇ ಅಕರಾಸ್ಥೆಯಿಂದ ಬೆಳೆಸಿದರೂ ಪ್ರತಿನಿತ್ಯ ಮನೆಯೊಳಗೆ ಕೇಳಿಬರುವ ಮಾತು ‘ನೀನು ಹೆಣ್ಣೆಂಬುದು ನೆನಪಿರಲಿ’ ಎಂಬುದಾಗಿ. ಇದು ಜಾಗ್ರತೆಗಾಗಿ ಹೇಳುವುದೇ ಆಗಿದ್ದರೆ ಹೆಣ್ಮಕ್ಕಳಷ್ಟೇ ಎಚ್ಚರವಾಗಿದ್ದರೆ ಸಾಕೇ! ಗಂಡ್ಮಕ್ಕಳಿಗೆ ಸೂತ್ರ ಪಾಲನೆಯಾಗದೇ ಎಂಬ ಪ್ರಶ್ನೆ ಹುಟ್ಟುವುದು ಸಹಜ. ಒಂದು ಕಾಲಕ್ಕೆ ದೈಹಿಕ ದೌರ್ಜನ್ಯದಿಂದ ಕುಗ್ಗಿಹೋಗುತ್ತಿದ್ದ ಮಹಿಳೆಯ ಪರಿಸ್ಥಿತಿ ಇಂದು ಆ ನಿಟ್ಟಿನಲ್ಲಿ ತುಸು ಸುಧಾರಿಸಿದ್ದರೂ ಮಾನಸಿಕ ದೌರ್ಜನ್ಯದ ಪ್ರಕರಣ ಹೆಚ್ಚಾಗಿ ಕೇಳಿಬರುತ್ತಿದೆ. ಅಷ್ಟೇ ಅಲ್ಲದೆ ಜಾಲತಾಣ ಬಳಕೆ ಹೆಚ್ಚಾಗುತ್ತಿದ್ದಂತೆ ಆನ್ ಲೈನ್ ದೌರ್ಜನ್ಯವೂ ಕಡಿಮೆಯೇನಲ್ಲ. ಉಗುಳಲೂ ನುಂಗಲೂ ಆಗದ ವಿಕ್ಷಿಪ್ತ ಮನಸ್ಥಿತಿಯೊಡನೆ ಖಿನ್ನತೆಗೊಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಗಳಿಗೆ ಬಲಿಯಾಗುತ್ತಿದ್ದಾರೆ.
ಏನಿದು ಆನ್ ಲೈನ್ ದೌರ್ಜನ್ಯ!
ಪ್ರಸ್ತುತ ಸೋಶಿಯಲ್ ಮೀಡಿಯಾಗಳದ್ದೇ ಹವಾ. ಅದರಲ್ಲೂ ಜಾಲತಾಣಗಳಿಗೆ ವೈಯಕ್ತಿಕ ಚಿತ್ರಗಳನ್ನು ಹರಿಯಬಿಡುವುದರಲ್ಲಿ ಮಹಿಳೆಯರೇ ಮುಂದಿದ್ದಾರೆ. ತೀರಾ ಖಾಸಗಿ ವಿಚಾರಗಳನ್ನು, ಕೌಟುಂಬಿಕ ಹಿನ್ನೆಲೆಗಳನ್ನು ಜಾಲತಾಣಗಳಲ್ಲಿ ಒಮ್ಮೆ ಹಾಕಿಬಿಟ್ಟರೆ ಆ ನಂತರ ವಿಶ್ವಕ್ಕೇ ತೆರೆದಿಟ್ಟ ಪುಸ್ತಕವಾಗುತ್ತದೆಯಷ್ಟೇ ಅಲ್ಲದೆ ಖಾತೆಯ ಯಾವುದೇ ಮಾಹಿತಿ, ಚಿತ್ರಗಳನ್ನು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದಾತ ಬಳಸಿಕೊಳ್ಳಬಹುದಾಗಿದೆ. ಇಂತಹ ತೊಂದರೆಗೆ ಸಿಲುಕಿದ ಹಲವು ಮಹಿಳೆಯರು ಮರ್ಯಾದೆಗೆ ಅಂಜಿ ವಿಷಯವನ್ನು ಗೌಪ್ಯವಾಗಿಡಲೆತ್ನಿಸಿದಷ್ಟು ಬ್ಲ್ಯಾಕ್ ಮೇಲ್ ನಂತಹ ದೌರ್ಜನ್ಯಗಳಿಗೆ ಒಳಗಾಗುವುದೇ ಹೆಚ್ಚು. ಇದು ಫೋಟೋ ಅಪ್ಲೋಡ್ ವಿಷಯವಾದರೆ ಇನ್ನು ಮಿತಿ ಮೀರಿದ ಚಾಟಿಂಗ್ ಹುಚ್ಚು ಚಟವಾಗಿ ಪರಿವರ್ತಿತವಾಗುವುದನ್ನೂ ನೋಡುತ್ತೇವೆ. ಜಾಲತಾಣದಲ್ಲಿ ಪರಿಚಯವಾದ ಮಂದಿಯ ಬಣ್ಣದ ಮಾತುಗಳಿಗೆ ಅಥವಾ ಹೊಗಳಿಕೆಗಳಿಗೆ ಮರುಳಾಗಿ ತಂದುಕೊಳ್ಳುವ ಅಪಾಯ ಕೊಲೆ, ಸುಲಿಗೆಯ ಮಟ್ಟಕ್ಕೆ ಹೋದರೂ ಆಶ್ಚರ್ಯವೇನಿಲ್ಲ! ಮೋಸ ಹೋಗುವವರು ಇರುವಷ್ಟು ದಿನ ಮಾಡುವವರೂ ಇರುತ್ತಾರೆಯೆಂಬುದು ತಿಳಿದ ವಿಚಾರವಾದರೂ ಅರಿವಿಲ್ಲದೆಯೇ ಆಗುವ ಅನಾಹುತ ಮಹಿಳೆಯನ್ನು ಕುಗ್ಗಿಸುವ ಬದಲಾಗಿ ಸೂಕ್ತ ಮಾರ್ಗೋಪಾಯ ಮುಖೇನ ಎದುರಿಸುವ ಧೈರ್ಯ ಇವತ್ತಿನ ದಿನಗಳ ತುರ್ತಾಗಿರುವುದರಿಂದ ಹೆಣ್ಣು ಕೇವಲ ದೈಹಿಕ ಶೋಷಣೆಯಷ್ಟೇ ಅಲ್ಲದೆ ಮಾನಸಿಕ ಶೋಷಣೆಯ ವಿರುದ್ಧವೂ ಹೋರಾಡುವಷ್ಟು ಸಬಲಳಾಗಬೇಕಾಗಿದೆ.
ಕಾಡುತ್ತಿರುವ ಕೌಟುಂಬಿಕ ಅಸಮಾಧಾನಗಳು
ಬಹುತೇಕ ಹೆಂಗಸರು ಇಂದು ಸ್ವಾವಲಂಬಿಗಳಾಗಿದ್ದಾರೆ, ಸ್ವತಂತ್ರ ಜೀವನವನ್ನು ನಡೆಸುತ್ತಿದ್ದಾರೆಯೆಂಬುದು ಖುಷಿಯ ವಿಚಾರವಾದರೂ ಆಕೆಯೊಳಗೆ ಬೆಚ್ಚಗೆ ಅವಿತಿರುವ ಹೆಣ್ತನ ಎಲ್ಲಿಯೂ ಕಾಣೆಯಾಗಿಲ್ಲ. ತಾನೆಷ್ಟೇ ಗಟ್ಟಿಗಿತ್ತಿಯೆಂದುಕೊಂಡರೂ ಹೊರಗಿನ ಜಗತ್ತಿನಲ್ಲಿ ಗಂಡಿಗೆ ಸರಿಸಮವಾಗಿ ದುಡಿಯುತ್ತಿದ್ದರೂ ಅವಳ ಸುಪ್ತ ಸ್ತ್ರೀ ಅಂತ:ಕರಣ ಸದಾ ಜಾಗೃತವಾಗಿರುತ್ತದೆ. ಸುಸ್ತಾಗಿ ಕೆಲಸ ಮುಗಿಸಿ ಮನೆಗೆ ಬರುವ ಹೆಣ್ಣು ಬಯಸುವುದು ತನಗೂ ಗಂಡಿನಂತೆಯೇ ತುಸು ವಿಶ್ರಾಂತಿ ಬೇಕೆಂದಾದರೂ ಮಧ್ಯಮ ವರ್ಗದ ಹಾಗೂ ಬಡತನದ ಕುಟುಂಬಗಳಲ್ಲಿ ಇದು ಕನಸಿನ ಮಾತು. ಹೊರಗೂ ಒಳಗೂ ನಿರಂತರ ದುಡಿಮೆ ಅವಳನ್ನು ‘ತಾನು ಹೆಣ್ಣಾಗಬಾರದಿತ್ತು’ ಎಂದು ಹೈರಾಣಾಗಿಸುವ ಜೊತೆಗೆ ಕುಟುಂಬದೊಳಗಿನ ಕಲಹಕ್ಕೆ ಎಡೆಮಾಡಿಕೊಡುತ್ತದೆ. ಪರಿಣಾಮ ಸದಾ ಸಿಡುಕು, ಜಗಳ ಇತ್ಯಾದಿ ಮನೆಯೊಳಗೆ ಬೇರೂರುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಹಾಗಿದ್ದರೆ ಬೇಕಾಗಿರುವುದೇನು!
ಸೃಷ್ಟಿ ನಿಂತಿರುವುದೇ ಪ್ರಕೃತಿ ಪುರುಷ ಸಮ್ಮಿಲನದಿಂದ ಆಗಿರುವಾಗ ಪ್ರತಿಯೊಂದು ವಿಷಯದಲ್ಲೂ ಗಂಡು ಹೆಣ್ಣಿನಷ್ಟೇ ಜವಾಬ್ದಾರಿ ತೆಗೆದುಕೊಳ್ಳುವುದು ಹಾಗೂ ಹೆಣ್ಣು ಗಂಡಿನಷ್ಟೇ ಪ್ರಬುದ್ಧಳಾಗಿ ವರ್ತಿಸುವುದು ಅಗತ್ಯವಾಗಿದೆ. ಪ್ರಕೃತಿಯನ್ನು ನಮಗೆ ಬೇಕಾದಂತೆ ಪರಿವರ್ತಿಸಿ ಬಳಸಿಕೊಳ್ಳುವುದೆಷ್ಟು ಮಾರಕವೋ ಅಂತೆಯೇ ಹೆಣ್ಣನ್ನೂ ಬೇಕಾದೆಡೆ ಹೊಂದಿಕೊಳ್ಳುವಂತೆ ಮಾರ್ಪಡಿಸುವುದು ಆಕೆಯ ಮೇಲಾಗುವ ದೌರ್ಜನ್ಯಗಳಲ್ಲಿ ಒಂದಾಗಿ ಪರಿಣಮಿಸುತ್ತದೆ.
ಮುಂದುವರಿದ ಶಿಕ್ಷಿತ ಸಮಾಜದಲ್ಲಿ ಮಹಿಳೆಯರ ಮೇಲಾಗುವ ಕೌರ್ಯಗಳಿಗೆ ಕಾರಣವೇನು ಎಂಬುದರ ಬಗ್ಗೆ ಜಾಗೃತಿಯೊಡನೆ ಅವಳಿಗೆ ಪ್ರತಿಭಟಿಸಲು ಇರಬೇಕಾದ ಧೈರ್ಯ ಹಾಗೂ ಸಂತ್ರಸ್ತೆ ಕಾನೂನಾತ್ಮಕವಾಗಿ ಹೋರಾಡಲು ಬೇಕಾದ ಎಲ್ಲಾ ಮಾಹಿತಿಗಳ ಬಗ್ಗೆ ಅರಿವು ಮುಖ್ಯವಾಗಿ ಬೇಕಾಗಿರುವುದು. ಎಷ್ಟೋ ಸಂದರ್ಭಗಳಲ್ಲಿ ಸಂತ್ರಸ್ತರು ಲೋಕಾಪವಾದದ ಅಂಜಿಕೆಯಿಂದ ಹಿಂಜರಿದಿದ್ದು ಸ್ತ್ರೀಪರ ಕಾನೂನುಗಳೇ ದುರುಳರ ಕೈಯೊಳಗೆ ಸಿಕ್ಕಿ ನಲುಗಿದ್ದಿದೆ. ಇಂದಾಗುತ್ತಿರುವ ದೌರ್ಜನ್ಯ ನೇರಾನೇರ ಆಗಬೇಕೆಂದಿಲ್ಲ ಯಾಕೆಂದರೆ ತಂತ್ರಜ್ಞಾನ ಅವಲಂಬನೆಯ ಕಾಲಘಟ್ಟದಲ್ಲಿ ಅಂತರ್ಜಾಲದೊಳಗೆ ಅರಿವಿರದೆಯೆ ಹೊಕ್ಕು ಸೋತು ಸುಣ್ಣವಾಗಿ ಒಳಗೊಳಗೆ ಕುದ್ದು ಹೋದವರ ಸಂಖ್ಯೆ ಬೆಳೆಯುತ್ತಿದೆ. ಇಂದು ಬೇಕಾಗಿರುವುದು ಸಂತ್ರಸ್ತೆಗೆ ಸಮಾಧಾನವೋ ಅನುಕಂಪವೋ ಅಲ್ಲ ಬದಲಾಗಿ ಅನ್ಯಾಯದ ವಿರುದ್ಧ ಸಿಡಿದೇಳುವ, ಹೋರಾಡುವ ಮಾನಸಿಕ ಸ್ಥೈರ್ಯ ತುಂಬಬೇಕಾಗಿದೆ. ದೌರ್ಜನ್ಯ ವಿರೋಧಿ ಕಾಯ್ದೆಗಳ ಬಗ್ಗೆ ಮಾಹಿತಿ ಹಾಗೂ ಅತ್ಯಾಚಾರ ಸಂಭವಿಸಿದ ವೇಳೆ ಆಕೆ ತೆಗೆದುಕೊಳ್ಳಬೇಕಾದ ತೀರ್ಮಾನದ ಸ್ಪಷ್ಟತೆ ತಿಳಿಸಿಹೇಳಬೇಕಾಗಿದೆ. ಸರಿಸುಮಾರು 51 ದೇಶಗಳ ಅಧ್ಯಯನ ಪ್ರಕಾರ 38 ಪ್ರತಿಶತ ಮಹಿಳೆಯರು ವೈಯಕ್ತಿಕವಾಗಿ ಆನ್ ಲೈನ್ ದೌರ್ಜನ್ಯಗಳನ್ನು ಅನುಭವಿಸಿದ್ದು ಪ್ರತಿಭಟನೆಯ ದಾರಿಯಲ್ಲಿ ಸಾಗದೆ ಮುಚ್ಚಿಹಾಕುತ್ತಿದ್ದಾರೆಂದು ಹೇಳಲಾಗುತ್ತಿದ್ದು ಇದರ ಕುರಿತಾಗಿ ಜಾಗೃತಿಗಾಗಿಯೇ ತಂತ್ರಜ್ಞಾನದ ಕುರಿತು ಅರಿವು ಹುಟ್ಟಿಸುವ ಕ್ರಮ ಕೈಗೊಳ್ಳಬೇಕಾಗಿದೆ.
ಕನ್ನಡಿಯಂತಿರಲಿ ಹೆಜ್ಜೆ
ನಿಲುವುಗನ್ನಡಿಯೆದುರು ನಿಂತ ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳುತ್ತೇವೆಯೇ ಹೊರತು ಅಲ್ಲಿ ಇನ್ಯಾರೋ ಕಾಣುವುದಿಲ್ಲ. ನೆರಳು ಕೂಡಾ ಹಿಂಬಾಲಿಸುವುದು ನಮ್ಮನ್ನೇ ಆಗಿರುವಾಗ ನೆರಳೆಂಬುದು ಮಾಯೆಯಲ್ಲ. ನಾವಿದ್ದಂತೆ ನಮ್ಮ ಛಾಯೆಯಿರುವಾಗ ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳುವುದು ನಮ್ಮದೇ ನಡತೆಯ ಛಾಯೆಯಾಗಿರುತ್ತದೆಯೇ ಹೊರತು ಭ್ರಮೆಯಾಗುವುದಿಲ್ಲವಾದುದರಿಂದ ಹೆಣ್ಣು ಗಂಡು ಎಂಬ ತಾರತಮ್ಯ ತೊರೆದು ಮೊದಲು ಸನ್ನಡತೆಯೆಂಬ ರೂಢಿ ಬರಬೇಕಾಗಿದೆ. ಹೆಣ್ಣು ಅನುಕಂಪ ಅಥವಾ ಹೆಣ್ಣೆಂಬ ರಿಯಾಯಿತಿಗೆ ಪಾತ್ರವಾಗುವುದಕ್ಕಿಂತಲೂ ಅವಳೊಳಗೆ ‘ನಾನು ಹೆಣ್ಣು, ಎಲ್ಲದರಲ್ಲಿಯೂ ಸರಿಸಮಾನವಾಗಿ ದುಡಿಯುವ ನನಗೆ ಅನುಕಂಪದ ಅಗತ್ಯವಿಲ್ಲ’ ಎನ್ನುವಷ್ಟರ ಮಟ್ಟಿಗೆ ಪ್ರಬುದ್ಧಳಾದಾಗ ಹಾಗೂ ಹೆಣ್ಣನ್ನು ಹೆಣ್ಣಿನಂತೆಯೇ ಕಂಡು ಗೌರವಿಸುವ ಮನಸ್ಸು ಸಮಾಜದೊಳಗೆ ಇದ್ದಾಗ ಅಷ್ಟೇ ‘ಸ್ತ್ರೀತ್ವಕ್ಕೊಂದು ಅರ್ಥ, ಹೆಣ್ಣಿಗೊಂದು ಅಸ್ಮಿತೆ’ ಸಿಕ್ಕಂತಾಗುವುದು. ಇಲ್ಲವಾದರೆ ಅದೆಷ್ಟೇ ಮಹಿಳಾ ದಿನಾಚರಣೆಗಳನ್ನು ಆಚರಿಸಿದರೂ ಹೆಣ್ಣು ವಾಚ್ಯವಾಗುವಳೇ ಹೊರತು ಸುಂದರ ಕವಿತೆ ಆಗಲಾರಳು.
ಅವಳ ಹೆಸರ ಹೇಳಬೇಡ
ಊರನರಸಿ ದಣಿಯಬೇಡ
ಹೆಣ್ಣೇ ಅವಳ ಹೊತ್ತ ಹೆಸರು
ಹೆಣ್ಣೇ ಅವಳ ಹೆತ್ತ ಬಸಿರು
ಎಂಬ ಕಡೆಂಗೋಡ್ಲು ಶಂಕರಭಟ್ಟರ ಕವಿವಾಣಿಯಂತೆ ನಮ್ಮ ನೆರಳಿಗಾಗಿ ಎಲ್ಲೆಲ್ಲೋ ಹುಡುಕಿ ಕೈಗೆ ಸಿಗದ ಮಾಯೆಯೆಂಬುದನ್ನು ಬಿಟ್ಟು ನಮ್ಮದೇ ಛಾಯೆಯನ್ನು ಕಾಪಿಡುವ ಮನಸ್ಸು ಪ್ರತಿಯೊಬ್ಬರಿಗಿರಲಿ.
ಅಕ್ಷತಾ ರಾಜ್ ಪೆರ್ಲ