ತೆಕ್ಕಟ್ಟೆ : ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಎ. 27ರಂದು ಗುಡ್ಡೆಅಂಗಡಿ ರಾ.ಹೆ. ಕೊಯ್ಕಾಡಿ ತಿರುವಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಗೋಕರ್ಣದ ಕಡೆಗೆ ಆರು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾದ ಪರಿಣಾಮ ಬೆಂಗಳೂರಿನ ಫೋನ್ ಪೇ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಇನ್ನೋವಾ ಕಾರಿನಲ್ಲಿ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಕೋಟ ಪೊಲೀಸ್ ಠಾಣಾಧಿಕಾರಿ ತೇಜಸ್ವಿ, ಸಿಬಂದಿ ಪ್ರಸನ್ನ, ಕೃಷ್ಣ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀಕೆಂಡ್ ಪ್ರವಾಸಕ್ಕೆ ಬಂದಿದ್ದರು
ಇನ್ನೋವಾ ಕಾರು ಚಾಲಕ ಮಿಥುನ್ (28) ಅವರ ಅತೀ ವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಂದಾಗಿ ಮುಡೇìಶ್ವರ, ಗೋಕರ್ಣದ ಕಡೆಗೆ ವೀಕೆಂಡ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಾಗಿದ್ದಾರೆ