ಬದುಕು ಮಾಯೆಯೋ ಅಥವಾ ಮಾಯೆಯೊಳಗೆ ಬದುಕೋ? ಎಂಬುದು ಬಹಳ ವರ್ಷಗಳಿಂದ ಇರುವಂತಹ ಒಂದು ಜಿಜ್ಞಾಸೆ. ಕೆಲವೊಮ್ಮೆ ಬದುಕು ಮಾಯೆ ಅನ್ನಿಸತೊಡಗಿದರೆ ಇನ್ನೂ ಕೆಲವು ಸಲ ಮಾಯೆಯೇ ಬದುಕನ್ನು ಆವರಿಸಿಕೊಂಡಂತೆ ಭಾಸವಾಗುತ್ತದೆ. ಈ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳಲು ಹೊರಟವರ ಸಂಖ್ಯೆ ದೊಡ್ಡದಾಗಿದ್ದರೂ ‘ಬದುಕು’ ಹೀಗಿದ್ದರೆ ಮಾತ್ರವೇ ಹೊನ್ನು ಅದಲ್ಲದಿದ್ದರೆ ಎಲ್ಲವೂ ಬರೀ ಮಣ್ಣು ಎಂದು ಸ್ಪಷ್ಟವಾಗಿ ಹೇಳಿದವರ ಲೆಕ್ಕ ಬಹಳ ಕಡಿಮೆಯೆಂದೇ ಹೇಳಬಹುದು, ಕಾರಣ! ಪ್ರತಿಯೊಬ್ಬನ ದೃಷ್ಟಿಕೋನವೂ ಭಿನ್ನವೆಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು. ಬದುಕೆಂದರೆ ಇಷ್ಟೇ ಎಂದು ಸ್ಪಷ್ಟವಾಗಿ ಮಂಡಿಸಿದವರು ಬೆರಳೆಣಿಕೆಯಷ್ಟು ಮಂದಿ ಮತ್ತು ಹೀಗೆ ಹೇಳಿದವರ ಸಾಲಿನಲ್ಲಿ ಡಿ.ವಿ.ಗುಂಡಪ್ಪನವರು ಕೂಡಾ ಒಬ್ಬರು.
ಜೀವನದಲ್ಲಿ ಪ್ರತಿಯೊಂದಕ್ಕೂ ಕಾರ್ಯ ಹಾಗೂ ಕಾರಣ ಇದೆ ಮತ್ತು ಅದು ಬಹಳ ಸರಳವಾಗಿ ನಿತ್ಯ ಬದುಕಿನಲ್ಲೇ ತಿಳಿದುಕೊಳ್ಳುವ ಯತ್ನವನ್ನೂ ಮಾಡಬಹುದು ಆದರೆ ಇವೆಲ್ಲಕ್ಕೂ ಮನಸ್ಸು ಮಾಡಬೇಕು ಎನ್ನುತ್ತಾ ಸುಲಭ ವಾಕ್ಯಗಳಲ್ಲಿ ಕಗ್ಗಂಟಾಗಿರುವ ಜೀವನ ಸಾರವನ್ನು ಕಗ್ಗ ಮುಖೇನ ತಿಳಿಸುತ್ತಾ ‘ಮಂಕುತಿಮ್ಮ ನೋಡು ಇದು ಇಷ್ಟೇ ಇರುವುದು ಕಣ್ತೆರೆದು ಜಗ ನೋಡು’ ಎಂದು ಹೇಳುತ್ತಾ ಕಗ್ಗದ ಸಾಲುಗಳನ್ನು ಹೆಣೆಯುತ್ತಾ ಹೋದವರು. ಜೀವನದ ಬೇರೆ ಬೇರೆ ಘಟ್ಟಗಳನ್ನು ಗಮನಿಸಿ ಪ್ರತಿಯೊಂದು ಘಟ್ಟಕ್ಕೂ, ಭಾವಗಳಿಗೂ ಒಂದೊಂದು ಉಪಮೆಗಳನ್ನು ಕೊಡುತ್ತಾ ಸಂಕೀರ್ಣ ಬದುಕಿನ ಮಜಲುಗಳನ್ನು ಸರಳವಾಗಿ ಹತ್ತುವಲ್ಲಿ ಸಹಕಾರಿಯಾಗಿರುವುದೇ ‘ಮಂಕುತಿಮ್ಮನ ಕಗ್ಗ’.
ಮನವನಾಳ್ವುದು ಹಟದ ಮಗುವನಾಳುವ ನಯದೆ |
ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ||
ಅನುಕೂಲಿಸದು ಬರಿಯ ಕೂಗು ಬಡಿತಗಳಿನದು |
ಇನಿತಿತ್ತು ಮರಸಿನಿತ……ಮಂಕುತಿಮ್ಮ || _ ೩೭೫
ಮನವನ್ನು ಆಳುವುದು ಮಗುವನ್ನು ಓಲೈಸುವಂತೆ. ಕೇವಲ ಮಾತುಗಳಿಂದ ಅಥವಾ ಯಾವುದೋ ಹಾಡಿನ ಸಾಲುಗಳಿಂದ ಮಗುವನ್ನು ಸಂತೈಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮನುಷ್ಯನ ಮನಸ್ಸನ್ನು ಕೂಡಾ ಪಳಗಿಸಬೇಕಾದರೆ ಬರಿಯತತ್ವ ಸಾಲುಗಳು ಸಾಕಾಗದು, ಬದಲಾಗಿ ಮಕ್ಕಳಿಗೆ ಅವರ ಅಭಿರುಚಿಗೆ ತಕ್ಕಂತೆ ಹೇಗೆ ಕಥೆಗಳನ್ನು ಹೆಣೆಯುತ್ತೇವೆಯೋ ಅದೇ ರೀತಿ ಮನಸ್ಸನ್ನು ನಮ್ಮ ಹಿಡಿತದಲ್ಲಿಡಬೇಕಾದರೆ ಮನಸ್ಸಿಗೆ ಹಿತವಾಗುವ ಹಾದಿಯಲ್ಲೇ ನಡೆಯಬೇಕು ಮತ್ತು ಅದು ಎಲ್ಲರೂ ಒಪ್ಪುವಂತದ್ದಾಗಿರಬೇಕು ಎಂಬುದು ಕಗ್ಗದ ಈ ಸಾಲಿನ ತಾತ್ಪರ್ಯ.
ರಚ್ಚೆ ಹಿಡಿದ ಮಗುವನ್ನು ಓಲೈಸುವುದು ಅಷ್ಟು ಸುಲಭದ ಮಾತಲ್ಲ. ಒಂದು ವಿಷಯಕ್ಕೆ ನೂರು ಪ್ರಶ್ನೆಗಳನ್ನು ಕೇಳುವ ಸಾಮರ್ಥ್ಯವಿದ್ದರೆ ಅದು ಮಕ್ಕಳಿಗಷ್ಟೇ. ಹೀಗೆ ಮಗು ಕೇಳುವ ಪ್ರಶ್ನೆಗಳಿಗೆ ಯಾವುದೋ ತತ್ವಜ್ಞಾನದ ಪುಸ್ತಕಗಳನ್ನು ಓದಿ ಹೇಳಿದರೆ ಅಥವಾ ಕ್ಲಿಷ್ಟ ಪದ್ಯಗಳನ್ನು ಹಾಡಿದರೆ ಹಟ ಜೋರಾಗುವುದಲ್ಲದೆ ಯಾವ ಪ್ರಯೋಜನವೂ ಇಲ್ಲ. ಮಗುವಿಗೆ ಅರ್ಥವಾಗದೆ ಪ್ರಶ್ನಿಸುವುದನ್ನೇ ಬಿಟ್ಟು ಚಂಡಿಬುದ್ಧಿ ಕಲಿಯುವ ಸಾಧ್ಯತೆಗಳಿವೆ. ಅದಕ್ಕೆ ಬದಲಾಗಿ ಮಗುವಿನ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಆ ಮಗು ಅರ್ಥಮಾಡಿಕೊಳ್ಳಬಲ್ಲ ಕಥೆಯ ಮೂಲಕ ಅಥವಾ ಅಭಿನಯ ಗೀತೆಗಳ ಮೂಲಕ ವಿವರಿಸಿದರೆ ಆ ಮಗು ಕಿವಿಯರಳಿಸಿ ಕೇಳಿ ನಂತರದಲ್ಲಿ ಹಟ ನಿಲ್ಲಿಸಿ ನಮ್ಮ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೆ ತನ್ನ ಜೀವಿತದಂತ್ಯದವರೆಗೂ ಮರೆಯದೆಯೇ ನೆನಪಿಟ್ಟು ಕೊಳ್ಳುತ್ತದೆಯೋ ಆ ರೀತಿ ಮನಸ್ಸುಕೂಡಾ. ರಚ್ಚೆ ಹಿಡಿದ ಮಗುವನ್ನಾಳುವಂತೆ ಮನಸ್ಸನ್ನು ಆಳುವುದು ಸಹ. ಒಂದು ಮುಗ್ಧ ಮಗುವಿನ ರೀತಿ ನೀತಿ ಹೇಗಿರುತ್ತದೆಯೋ ಅಂತೆಯೇ ಮನಸ್ಸು. ನಾನು ಈ ಕ್ಷಣ ಮನದೊಳಗೆ ಇಂತಹದ್ದೇ ಭಾವಗಳನ್ನು ಸೃಜಿಸಬಲ್ಲೆಯೆಂಬುದು ಮನುಷ್ಯನ ಮೂರ್ಖತನ. ರಚ್ಚೆ ಹಿಡಿದು ಬೊಬ್ಬಿಡುವ ಮನಸುಗಳಿಗೆ ಯಾವ್ಯಾವುದೋ ರೀತಿ ಸಮಾಧಾನಿಸುವ ಬದಲಾಗಿ ಅಥವಾ ಇನ್ನೂ ರೊಚ್ಚಿಗೆಬ್ಬಿಸುವ ಮೊದಲು ಮನಸು ಇಷ್ಟಪಡುವ ರೀತಿಯಲ್ಲೇ ಸಂತೈಸಿದರೆ ಮನಸ್ಸು ಬುದ್ಧಿಯ ಹಿಡಿತಕ್ಕೆ ಬರುತ್ತದೆಯೆಂಬುದನ್ನು ತಿಳಿಸಿರುವ ಗುಂಡಪ್ಪವನವರು ಇಲ್ಲಿ ಮನಸ್ಸನ್ನು ರಚ್ಚೆ ಹಿಡಿದಿರುವ ಮಗುವಿಗೆ ಹೋಲಿಸುವುದರ ಮೂಲಕ ಮನಸನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಮನಸ್ಸೇ ನಮ್ಮನ್ನಾಳುವ ಅಪಾಯವಿದೆಯೆಂದು ಬಹಳ ಸೂಕ್ಷ್ಮವಾಗಿ ವಿವರಿಸಲು ಪ್ರಯತ್ನಪಟ್ಟಿದ್ದಾರೆ.
ಮನಸನ್ನು ವಿವಿಧ ರೀತಿಯಲ್ಲಿ ಕಲ್ಪಿಸಿಕೊಳ್ಳುವ ಚಾತುರ್ಯ ಗುಂಡಪ್ಪನವರಿಗೆ ಲೀಲಾಜಾಲವಾಗಿ ಬಂದಿದೆಯೆಂದು ಕಗ್ಗದ ೩೭೪ ರಿಂದ ೩೭೮ರವರೆಗಿನ ಪದ್ಯಗಳೇ ಸಾಕ್ಷಿ. ಮನಸಿನ ಬಗ್ಗೆ ಹೇಳುವುದು ಸಾಮಾನ್ಯವಾಗಿ ಬಲ್ಲವರಿಗೆ ಕಷ್ಟವೆನಿಸದಿದ್ದರೂ ಮನಸಿನ ಹದದ ಬಗ್ಗೆ ಬರೆಯುವುದು ತುಸು ಕಷ್ಟವೇ. ಕಾರಣ! ಹದವೆಂಬುದು ಅಷ್ಟು ಬೇಗನೇ ಗುರುತಿಗೆ ಸಿಗದಿರುವುದು! ಗುಂಡಪ್ಪನವರು ಹೇಳುವ ಪ್ರಕಾರ ಮನಸೆಂಬುದು ಹದತಪ್ಪುವುದಕ್ಕೆ ಮೂಲ ಕಾರಣವೇ ಹಸಿವು. ಜಗತ್ತಿನ ಎಲ್ಲಾ ಅವಾಂತರಗಳಿಗೆ ಮೂಲಕಾರಣ ಹಸಿವು ಹಾಗೂ ಇದು ಕೇವಲ ಹೊಟ್ಟೆ ಹಸಿವು ಮಾತ್ರವಲ್ಲ ಬದಲಾಗಿ ಹೆಸರಿನ ಹಸಿವು, ಪ್ರಚಾರದ ಹಸಿವು, ಪ್ರಸಿದ್ಧಿಯ ಹಸಿವು, ಹೀಗೆ ನಾನಾ ಮುಖಗಳನ್ನು ಹೊಂದಿದ್ದು ಈ ಹಸಿವುಗಳಿಂದಲೇ ಮನಸು ಹದಗೆಡುತ್ತಾ ಹೋಗುತ್ತದೆ ಎಂಬುದನ್ನು ೩೭೭ನೇ ಈ ಪದ್ಯದಲ್ಲಿ ನಾವು ತಿಳಿದುಕೊಳ್ಳಬಹುದು.
ಉದರದೈವಕೆ ಜಗದೊಳೆದುರು ದೈವವೆಲ್ಲಿ?|
ಮೊದಲದರ ಪೂಜೆ ; ಮಿಕ್ಕೆಲ್ಲವದರಿಂದ
ಮದಿಸುವುದದಾದರಿಸೆ, ಕುದಿವುದು ನಿರಾಕರಿಸೆ |
ಹದದೊಳಿರಿಸುವುದೆಂತೋ?…………ಮಂಕುತಿಮ್ಮ ||
ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದದೇವರಿಲ್ಲ, ಎಲ್ಲಕ್ಕೂ ಮೊದಲು ಉದರಪೂಜೆ ನಡೆಯಲಿ. ಹಸಿವು ಶಾಂತವಾದರೆ ವರವಾಗುವುದು, ಭುಗ್ಗನೆದ್ದು ನಿಂತರೆ ಅಶಾಂತಿಯೇಳುವುದು. ಇವೆರಡನ್ನೂ ಸಮತೋಲನದಲ್ಲಿಟ್ಟರೆ ಮಾತ್ರ ಹದವಾಗಿರುವುದು ಎಂಬುದು ಈ ಕಗ್ಗದ ತಾತ್ಪರ್ಯವಾಗಿದ್ದರೂ ಇಲ್ಲಿ ಉದರದ ಹಸಿವು ಎಂಬುದನ್ನು ಮನಸಿನ ಕುರಿತಾಗಿ ಹೇಳಿದ್ದಾರೆಂಬುದನ್ನು ಗಮನಿಸಬೇಕು. ಯಾವತ್ತೂ ಅತಿಯಾದ ಹಸಿವು ಮತ್ತು ಹಸಿವೆಯೇ ಇಲ್ಲದಿರುವುದು ಇವೆರಡೂ ರೋಗ ಲಕ್ಷಣವೆಂದು ಗುರುತಿಸಲ್ಪಟ್ಟಿರುವುದು. ಆದುದರಿಂದ ಅತಿಯಾದ ಹಸಿವು ಸಿಟ್ಟಿಗೆ ಕಾರಣವಾದರೆ, ಹಸಿವೆಯೇ ಇಲ್ಲದಿರುವುದು ಜಡತ್ವಕ್ಕೆ ಕಾರಣವಾಗುತ್ತದೆ. ಹೀಗೆಯೇ ಮನಸು ಕೂಡಾ ಅತಿಯಾದ ಲೋಭದ ಹಸಿವೆಯಿಂದ ತುಂಬಿದರೆ ಕ್ರುದ್ಧಗೊಳ್ಳುತ್ತದೆ ಮತ್ತು ಆಸೆಯೇ ಇಲ್ಲದ ಮನಸು ನೀರಸ ಬದುಕಿಗೆ ಕಾರಣವಾಗುತ್ತದೆ. ಆ ಕಾರಣಕ್ಕಾಗಿ ಆಸೆಯನ್ನು ಹತೋಟಿಯಲ್ಲಿಟ್ಟು ಕೊಂಡು ಅಗತ್ಯವಿದ್ದ ವಿಷಯದ ಬಗ್ಗೆ ಮಾತ್ರವೇ ಕಾರ್ಯಪ್ರವೃತ್ತರಾದರೆ ಮನಸು ಕೂಡಾ ತುಂಬಿದ ಹೊಟ್ಟೆಯಂತೆ ಸಂತಸವಾಗಿರುತ್ತದೆ ಅದಲ್ಲದೆಯೇ ಇದೆಯೆಂದು ಬಿರಿಯುವಷ್ಟು ತಿನ್ನುವುದು ಮತ್ತು ಇಲ್ಲವೆಂದು ಕೊರಗುವುದು ಇವೆರಡೂ ಅಜೀರ್ಣ ಹಾಗೂ ದುರ್ಬಲತೆಯೆಂಬ ರೋಗಗಳನ್ನು ಉಂಟುಮಾಡುತ್ತದೆ ಎನ್ನುವ ಗುಂಡಪ್ಪನವರು ಮನಸನ್ನು ಹದವಾಗಿಟ್ಟುಕೊಳ್ಳಬೇಕಾದರೂ ಕಾಲಕಾಲಕ್ಕೆ ಸದ್ವಿಚಾರಗಳ ಭಕ್ಷ್ಯಂಗಳ ಉಣಬಡಿಸಬೇಕೆಂದು ಉದರವನ್ನು ಉದಾಹರಿಸಿ ಹೇಳಿರುವ ಶೈಲಿ ಬಹಳ ಸುಂದರವಾಗಿರುವಂತಹದ್ದು.
ಹಸಿವೆಯನ್ನು ಹತ್ತಿಕ್ಕುವುದೇನೋ ಸರಿ, ಆದರೆ ಹೇಗೆ ಹತ್ತಿಕ್ಕುವುದು? ಜಗತ್ತಿನಲ್ಲಿರುವ ಹಸಿವುಗಳೇ ಬಹಳ ವಿಚಿತ್ರವಾದುದು…..ಪರಿಪರಿಯ ಈ ಹಸಿವುಗಳನ್ನು ನಿಗ್ರಹಿಸಿ ಬದುಕುವುದು ಹೇಗೆ? ಎಂಬ ಪ್ರಶ್ನೆಗೆ ಗುಂಡಪ್ಪನವರು ಕೊಟ್ಟಂತಹ ಉತ್ತರ ಬಹಳ ಸರಳವಾದುದು ಮತ್ತು ಅನುಸರಣೆಗೆ ತೀರಾ ಕಷ್ಟವೂ ಅಲ್ಲ.
ಈ ಜಗದಗಂಧ ಪರಿಪರಿ ಹಸಿವ ಕೆಣಕುತಿರೆ |
ಭೋಜನವ ನೀಡೆನೆನೆ ಮನ ಸುಮ್ಮನಿಹುದೆ?||
ಸಾಜಗಳ ಕೊಲ್ಲೆನುವ ಹಠಯೋಗಕ್ಕಿಂತ ಸರಿ |
ರಾಜಯೋಗದುಪಾಯ ………..ಮಂಕುತಿಮ್ಮ ||
೩೭೪ನೇ ಈ ಕಗ್ಗ ಪ್ರಕಾರ ಗುಂಡಪ್ಪನವರು ಹೇಳುವುದೇನೆಂದರೆ ಮನಸನ್ನು ಕೂಡಾ ಹತೋಟಿಯಲ್ಲಿಟ್ಟುಕೊಳ್ಳಬೇಕಾದರೆ ಬಹು ವಿಧವಾಗಿ ದಂಡಿಸಿಕೊಳ್ಳುವುದು ಅತೀ ಅಗತ್ಯ ಆದರೆ ಹೇಗೆ ದಂಡನೆ ಕೊಡಬೇಕು? ಎಂಬುದು ತಿಳಿಯದೆಯೇ ಹಲವರು ತಪ್ಪೆಸಗುತ್ತಿದ್ದಾರೆ.. ಮನಸ್ಸು ನಿಯಂತ್ರಣದಲ್ಲಿರಬೇಕೆಂಬ ಒಂದೇ ಕಾರಣಕ್ಕಾಗಿ ದೇಹವನ್ನು ದಂಡಿಸಿ…. ಇಂದ್ರಿಯಗಳಿಗೆ ಸರಿಯಾದ ಆಹಾರವನ್ನೂ ಕೊಡದೆ ತಪ್ಪೇ ಮಾಡದ ದೇಹವನ್ನೂ, ಇಂದ್ರಿಯವನ್ನೂ ಶಿಕ್ಷೆಗೊಳಪಡಿಸುವುದು “ಹಠಯೋಗ”. ಬದಲಾಗಿ ಪ್ರಾಣಾಯಾಮ, ಧ್ಯಾನ ಮುಂತಾದ “ರಾಜಯೋಗ” ವಿಧಾನವನ್ನು ಅನುಸರಿಸಿ ಮನಸು ಹತೋಟಿಗೆ ಬಂದೇ ಬರುವುದೆಂಬುದನ್ನು ದೃಢವಾಗಿ ಹೇಳುವ ಮೂಲಕ ನಾವು ದಿನನಿತ್ಯ ಮಾಡಬೇಕಾದ ಕರ್ತವ್ಯವನ್ನು ಮಾಡದೆಯೇ ಅನಗತ್ಯ ವಿಷಯಗಳಿಗೆ ಮೂಗು ತೂರಿಸಹೊರಟರೆ ವ್ಯರ್ಥ ಸಮಯವಷ್ಟೇ ಅಲ್ಲ ಮನಸಿನ ಆರೋಗ್ಯವೂ ಎಂಬುದನ್ನು ‘ಯೋಗ’ವೆಂಬ ಸನಾತನ ವೈದ್ಯಪದ್ಧತಿಯ ಮೂಲಕ ಹೇಳ ಹೊರಟಿರುವುದು ಗಮನಿಸಬೇಕಾದ ಸಂಗತಿ. ‘ಹಠಯೋಗ’ಕ್ಕಿಂತ ‘ರಾಜಯೋಗ’ ಮೇಲೆನ್ನುವ ಕವಿ ಯಾವತ್ತಿಗೂ ಇದನ್ನು ಬಿಟ್ಟೇ ತೀರುತ್ತೇನೆಂಬ ಹಠಕ್ಕಿಂತ ಬಿಟ್ಟು ಬದುಕುವುದನ್ನು ರೂಢಿಯಾಗಿಸುವು ಮೇಲೆ ಎಂಬುದನ್ನು ತನುವಿಗೂ ಮನಸಕ್ಕೂ ಹೋಲಿಕೆ ನೀಡುತ್ತಾ ವಿವರಿಸಿರುವುದು ಉತ್ತಮ ವಿಚಾರ ಯಾಕೆಂದರೆ ಮುಖ ಮನಸಿನ ಕನ್ನಡಿ. ಅದೆಷ್ಟೋ ಬಾರಿ ಮನದಲ್ಲಿದ್ದುದನ್ನು ಹೇಳುವುದೇ ಮುಖಭಾವ. ಮನದಲ್ಲಿ ಬೇಕೆನ್ನುವ ಆಸೆಯಿಟ್ಟುಕೊಂಡು ಸರ್ವವನ್ನೂ ತ್ಯಜಿಸಿದ ಮುಖವಾಡ ತೊಡಲು ಮುಖ ಸುಮ್ಮನಿದಿದ್ದೀತೇ? ಅದರಿಂದ ಬೇಡವೆಂದು ನಿಶ್ಚಯಿಸಿಕೊಂಡು ಆ ಹಾದಿಯಲ್ಲಿ ನಡೆದರೆ ಆಸೆಗಳು ಹುಟ್ಟುವುದನ್ನೇ ತಡೆಯಬಹುದು. ಹುಟ್ಟೇ ಇಲ್ಲದಿದ್ದರೆ ಜೀವಿತವೆಲ್ಲಿ? ಜೀವಿತವನ್ನು ಕೊಲ್ಲುವ ನಿಯಂತ್ರಣಕ್ಕಿಂತ ಮೊಳಕೆಯೊಡೆಯದಂತೆ ಮಾಡುವುದೇ ಲೇಸು ಮತ್ತು ಬಲಾತ್ಕಾರಕ್ಕಿಂತ ಸಾಕೆನ್ನುವುದೇ ವಾಸಿ. ಬೇಕಾದುದನ್ನು ಕೊಡದೆ ಕೊಲ್ಲುವುದಕ್ಕಿಂತ ಬೇಡವೆಂಬ ಅಭ್ಯಾಸವನ್ನು ರೂಢಿಸಿಕೊಳ್ಳೋಣ ಎಂಬ ಚಿಂತನೆ ಮುಖೇನ ಲೋಕದಲ್ಲಿ ಅತಿಯಾಸೆಯಿಂದ ನಡೆಯುವ ಅನಾಹುತಗಳನ್ನು ತಡೆಯಲು ಮನಸಿಗಷ್ಟೇ ಸಾಧ್ಯಎಂದು ತಿಳಿಸಿದ್ದಾರೆ.
ಮನದ ತಲ್ಲಣಗಳನ್ನು ಉದರಕ್ಕೆ, ಹಸಿವಿಗೆ, ಶಿಶುವಿಗೆ ಹೋಲಿಸುತ್ತಾ ಹೋದ ಕವಿ ನಂತರದಲ್ಲಿ ಮನಸ್ಸಿನ ಹದವೆಂದರೆ ಇವೆಲ್ಲಕ್ಕೂ ಹೊರತಾಗಿ ಹಾಲು ಕಾಯಿಸಲು ಇಟ್ಟ ಒಲೆಯೆಂದು ಬಣ್ಣಿಸುತ್ತಾರೆ. ಒಲೆಯಲ್ಲಿ ಉರಿ ಹೆಚ್ಚಾದರೆ ಹಾಲುಕ್ಕಿ ತಳ ಹಿಡಿಯಬಹುದು ಅಥವಾ ಕಡಿಮೆಯಾದರೆ ಹಸಿವಾಸನೆ ಹೋಗದ ನಾತ ಮೂಗಿಗಡರಬಹುದು. ಒಂದು ವೇಳೆ ಆಗಾಗ ಕದಡಿಸಹೊರಟರೆ! ಒಡೆದು ಹಾಳಾಗಿ ಹೋಗುವುದು, ಆದುದರಿಂದ ಒಲೆಯಉರಿ ಹದವಾಗಿ ಉರಿಯಬೇಕು. ಹೀಗೆಯೇ ಮನಸಿನ ಹದಕೂಡಾ. ಕಡಿಮೆಯಾದರೆ ಅದೊಂದು ಮಾನಸಿಕ ರೋಗವಾಗಬಹುದು ಅಥವಾ ಹೆಚ್ಚಾದರೆ ಪ್ರಯೋಜನವೇ ಇರದ ಕೊರಡಾಗಬಹುದು. ಆದುದರಿಂದ ಬದುಕು ಸೊಬಗಿರಲು ಹದವಾದ ಮನಸ್ಥಿತಿಯನ್ನು ನಮ್ಮದಾಗಿಸಿ ಕೊಳ್ಳೋಣವೆಂಬ ೩೭೫ನೇ ಕಗ್ಗದ ಈ ಸಾಲುಗಳ ತಾತ್ಪರ್ಯ ಉಳಿದವುಗಳಿಗಿಂತಲೂ ಹಾಲಿನ ಗಿಣ್ಣಿನಂತೆ ರುಚಿಯಾಗಿ-ರುವಂತಹದ್ದು.
ಕುದಿ ಹೆಚ್ಚೆ ವೆಗಟಹುದು; ಕಡಿಮೆಯಿರೆ ಹಸಿನಾತ |
ಕದಡಲೊಡೆವುದು ಹಾಲು; ಸೂಕ್ಷ್ಮವದರ ಹದ ||
ಅದರವೊಲೆ ಮನದ ಹದ, ಅದನೆಚ್ಚರದಿ ನೋಡು |
ಬದುಕು ಸೊಗ ಹದದಿಂದ……….ಮಂಕುತಿಮ್ಮ ||
ಬದುಕು ಹಾಲಾದರೆ ಮನಸು ಹಾಲನ್ನು ಕಾಯಿಸಲು ಇಟ್ಟ ಒಲೆ. ಅಲ್ಪಜ್ಞಾನಿ ತನಗೆಲ್ಲವೂ ಬಲ್ಲುದೆಂಬಂತೆ ಇದ್ದರೆ ಆತನಿಂದ ಪ್ರಯೋಜನವಿಲ್ಲ, ಇದ್ದ ಜ್ಞಾನವೇ ಬಹಳಷ್ಟಾಯಿತೆಂದು ಬೀಗಿದರೆ ಅದು ಅಹಂಕಾರ ಮತ್ತು ಮಹಾಜ್ಞಾನವನ್ನು ತನ್ನದಾಗಿಸಿಕೊಂಡು ಇತರರದ್ದೇನೂ ಅಲ್ಲವೆಂಬಂತಿದ್ದರೆ ಆತ ಗರ್ವಿ, ಇವೆಲ್ಲದರನ್ನು ಹೊರತುಪಡಿಸಿ ನಾನು ಏನೂ ಅಲ್ಲವೆಂಬಂತೆ ಇದ್ದು ಬಿಟ್ಟರೆ ಆತನೇ ನಿಜವಾದ ಪಂಡಿತ. ಆದರೆ ಈ ಗುಣವನ್ನು ಬೆಳೆಸಿಕೊಳ್ಳಬೇಕಾದರೆ ಮನಸೆಂಬ ಒಲೆಯುರಿ ಸರಿಯಾಗಿ ಕಾಯಬೇಕು. ‘ತನ್ನಿಂದ ಜಗವಲ್ಲ, ಜಗದೊಳಗೆ ತಾನೊಬ್ಬ’ ಎಂಬ ರೀತಿ ಮನಸನ್ನು ಸಜ್ಜಾಗಿಸಿದವನು ಮಾತ್ರವೇ ಭವಸಂಸಾರದ ಉಯ್ಯಾಲೆ ಜೀಕಲು ಸಾಧ್ಯವೆನ್ನುತ್ತಾ ಎಲ್ಲಕ್ಕೂ ಮೊದಲು ಮನಸೆಂಬ ನೆಲವನ್ನು ಹದಗೊಳಿಸಿ ಎಂಬ ಪಾಠವನ್ನು ತಿಳಿಸಿದ್ದಾರೆ.
ತನುವಿನಾಲಯೊದಳಗಿನ ಮನವೆಂಬ ಗರ್ಭಗುಡಿಯನ್ನು ಗುಂಡಪ್ಪನವರು ವರ್ಣಿಸಿದ ಪರಿಯೇ ಅನುಪಮ ಅನನ್ಯ. ಶಿಶುವಾಗಿ, ರಾಜಯೋಗಿಯಾಗಿ, ಉದರದ ಹಸಿವಾಗಿ, ಒಲೆಯ ಉರಿಯಾಗಿ ಹೀಗೆ ಬಹುಮುಖ ಆಯಾಮಗಳಲ್ಲಿ ಮನವನ್ನು ವಿಶ್ಲೇಷಿಸಿದ ಗುಂಡಪ್ಪನವರ ಪ್ರಕಾರ ಸಕಲಕ್ಕೂ ಕಾರಣ ಮನಸ್ಸು ಮತ್ತು ಆ ಮನಸ್ಸಿನ ಸಮತೋಲನ. ಇವನ್ನು ಜತನವಾಗಿಸಿ ಕೊಂಡು ಬಂದಾಗಲಷ್ಟೇ ರೂಢಿಯೊಳಗುತ್ತಮ ಎನಿಸಿಕೊಳ್ಳುವ ಅರ್ಹತೆ ಮನುಷ್ಯನದ್ದು. ಯೋಗ್ಯನೆನಿಸಿಕೊಳ್ಳಲು ಅರ್ಹತಾ ಪಟ್ಟಿಯಲ್ಲಿರುವ ಈ ಗುಣವನ್ನು ಅಭ್ಯಾಸ ಮಾಡಿಕೊಳ್ಳುವುದು ಇಂದಿನ ಮುಖ್ಯ ಅಗತ್ಯವಾಗಿದೆ. ನಾನು ನಾನೆಂದು ಬೀಗುತ್ತಿದ್ದ ಹುಲುಮಾನವನನ್ನು ಒಂದು ಕಾಲದಲ್ಲಿ ವರ್ಷಗಳ ಕಾಲ ಅಲುಗಾಡಿಸಿದ್ದು ತೃಣವೂ ಅಲ್ಲದ, ರವಕ್ಕಿಂತಲೂ ಕಿರಿದಾದ ಪುಟ್ಟವೈರಸ್. ಆ ಸಂದರ್ಭದಲ್ಲಿ ಮನಸ್ಥಿತಿಯ ಬಹಳಷ್ಟು ಏರುಪೇರುಗಳಿಗೆ ಮೂಕಸಾಕ್ಷಿಗಳಾಗಿ ಅನುಭವಿಸುತ್ತ ಬಂದಿರುವುದರಿಂದ ನಮ್ಮ ಮನಸು ನಮ್ಮ ಕೈಯಲ್ಲಿದೆ, ಬುದ್ಧಿಯ ಕೈಗೆ ಮನಸನ್ನು ಕೊಡೋಣ, ಮನದ ಕೈಗೆ ಬುದ್ಧಿಯನ್ನಲ್ಲ ಎಂಬ ಕಿವಿಮಾತಿನಂತೆ ಮುನ್ನಡೆದರೆ ಸರಳ ಅರ್ಥಪೂರ್ಣ ಜೀವನಗೀತೆಗೊಂದು ಸಾರ್ಥಕ್ಯ.
ಅಕ್ಷತಾರಾಜ್ ಪೆರ್ಲ