ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅಭಿನಯದ ‘ಜೈಲರ್’ (Jailer) ಸಿನೆಮಾ ತಮಿಳು ಚಿತ್ರರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಎರಡನೇ ಚಿತ್ರವಾಗಿ ಹೊರ ಹೊಮ್ಮಿರುವ ಬೆನ್ನಲ್ಲೇ ಕಾಲಿವುಡ್ (Kollywood) ಕಡೆಯಿಂದ ಇನ್ನೊಂದು ಸೆನ್ಸೇಷನಲ್ ಸುದ್ದಿ ಬಂದಿದೆ.
ಅದು ರಜನಿಕಾಂತ್ ಅಭಿನಯದ ಮುಂದಿನ ಚಿತ್ರದ ಕುರಿತಾದ ಸುದ್ದಿಯಾಗಿದ್ದು, ಲೈಕಾ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರಕ್ಕೆ ‘ತಲೈವರ್ 170’ (Thalaivar170) ಎಂದು ಹೆಸರಿಡಲಾಗಿದೆ.
ಈ ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಧಿಗ್ಗಜರು ಮಾತ್ರವಲ್ಲದೇ ಬಾಲಿವುಡ್ ನ ಸೂಪರ್ ಸ್ಟಾರ್ ಗಳೂ ಪಾತ್ರ ಮಾಡುತ್ತಿರುವುದು ರಜನಿ ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
‘ಜೈ ಭೀಮ್’ (Jai Bheem) ಚಿತ್ರದ ನಿರ್ದೆಶಕ ಟಿ ಜೆ ಜ್ಞಾನವೇಲು (TJ Gnanavel) ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ‘2.0’ ಬಳಿಕ ಲೈಕಾ ಪ್ರೊಡಕ್ಷನ್ಸ್ (Lyca Productions) ಮತ್ತೆ ರಜನಿ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿರುವುದು ವಿಶೇಷವಾಗಿದೆ.
ಆದರೆ, ಇದೆಲ್ಲದ್ದಕ್ಕಿಂತ ಬಂಬಾಟ್ ಸುದ್ದಿ ಏನಂದ್ರೆ, ‘ತಲೈವರ್ 170’ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಧಿಗ್ಗಜ ಬಿಗ್ ಬಿ ಎಂದೇ ಹೆಸರುವಾಸಿಯಾಗಿರುವ ಅಮಿತಾಭ್ ಬಚ್ಚನ್ (Amitabh Bachchan) ಪಾತ್ರ ನಿರ್ವಹಿಸುತ್ತಿರುವುದು.
ಈ ಸುದ್ದಿ ನಿಜವಾದಲ್ಲಿ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ 32 ವರ್ಷಗಳ ಬಳಿಕ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಂತಾಗುತ್ತದೆ. ಈ ಹಿಂದೆ ಈ ಜೋಡಿ ‘ಹಮ್’, ‘ಅಂಧಾ ಕಾನೂನ್’ ಮತ್ತು ‘ಗಿರಫ್ತಾರ್’ ಚಿತ್ರಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿತ್ತು.
ಬಿಗ್ ಬಿ ಹೊರತುಪಡಿಸಿ, ಮಲಯಾಳಂ ಸೂಪರ್ ಸ್ಟಾರ್ ಫಾ ಫಾಝಿಲ್ ಎಂದೇ ಹೆಸರುವಾಸಿಯಾಗಿರುವ ಫಾಹದ್ ಫಾಝಿಲ್ (Fahadh Faasil), ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ (Rana Daggubati), ನಟಿ ಮಂಜು ವಾರಿಯರ್ (Manju Warrier) ಸಹಿತ ತಾರಾ ಗಡಣವೇ ಈ ಚಿತ್ರದಲ್ಲಿರುವುದು ಸಿನಿ ರಸಿಕರಿಗೆ ರಸದೌತಣವೇ ಸರಿ.
ಇನ್ನು, ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ನಮ್ಮ ಚಂದನವನದ ಶಿವಣ್ಣ (Shivarajkumar) ಮಿಂಚಿದಂತೆ, ತಲೈವರ್ 170 ಚಿತ್ರದಲ್ಲಿ ಸ್ಯಾಂಡಲ್ ವುಡ್ (Sandalwood) ನ ಯಾವ ನಟ-ನಟಿಗೆ ಚಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ಸಿನೆಮಾ ಸೆಟ್ಟೇರಲಿದ್ದು, ಮುಂದಿನ ವರ್ಷ ಮಾರ್ಚ್ ನಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. ತಲೈವರ್ 170 ಚಿತ್ರ 2024ರ ಮಧ್ಯಭಾಗದಲ್ಲಿ ಬೆಳ್ಳಿ ತೆರೆಯನ್ನಪ್ಪಳಿಸುವ ನಿರೀಕ್ಷೆಯಿದೆ.
ಈ ನಡುವೆ ರಜನಿಕಾಂತ್ ಅವರು ತಮ್ಮ ಮಗಳು ಐಶ್ವರ್ಯಾ ಅವರ ‘ಲಾಲ್ ಸಲಾಂ’ ಚಿತ್ರದಲ್ಲೂ ನಟಿಸಿದ್ದಾರೆ.