Site icon newsroomkannada.com

ಬಡ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಲು ‘ನವಶಕ್ತಿ ಫ್ರೆಂಡ್ಸ್ ಸರ್ಕಲ್’ ಜವನೆರ್ ವೇಷ ಪಾಡ್ಯೆರ್!

ಬಂಟ್ವಾಳ: ನವರಾತ್ರಿ ಎಂದರೆ ಹುಲಿ ಸಹಿತ ವಿವಿಧ ವೇಷಗಳದ್ದೇ ಅಬ್ಬರ. ಇತ್ತೀಚಿನ ದಿನಗಳಲ್ಲಿ ಆರ್ಥಿಕವಾಗಿ ಅಶಕ್ತರಾಗಿರುವ ರೋಗಿಗಳಿಗೆ ಮತ್ತು ಬಡ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ ವೇಷಗಳನ್ನು ಹಾಕಿ ನಿಧಿ ಸಂಗ್ರಹ ಮಾಡುವ ಪರಿಪಾಠ ಕರಾವಳಿಯಾದ್ಯಂತ ನಡೆಯುತ್ತಿದೆ.

ಇದಕ್ಕೊಂದು ನಿದರ್ಶನವೆಂಬಂತೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಭಾಷ್ ನಗರ ಗುರುಮಂದಿರದ ನವಶಕ್ತಿ ಫ್ರೆಂಡ್ಸ್ ಸರ್ಕಲ್ ತಂಡದ ಸದಸ್ಯರು ಈ ಬಾರಿ ಮಾರ್ನೆಮಿ ವೇಷ ಹಾಕಿ ಅದರಲ್ಲಿ ಬಂದ ಹಣವನ್ನು ಬಡ ಕುಟುಂಬಕ್ಕೆ ನೀಡುವ ಪ್ರಶಂಸಾರ್ಹ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದಾರೆ.

ಇಲ್ಲಿನ ನಾರಾಯಣಗುರು ಮಂದಿರದಲ್ಲಿ ಮೊದಲಿಗೆ ಪ್ರಾಥನೆಯನ್ನು ಸಲ್ಲಿಸಿ ಬಳಿಕ ಸಜೀಪಮೂಡ ಬೇಂಕ್ಯದಲ್ಲಿ ಶಾರದಾ ಮಾತೆಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಎರಡು ದಿನಗಳ ಕಾಲ ಗ್ರಾಮದ ಮನೆ ಮನೆಗಳಿಗೆ ತೆರಳಿ ನಿಧಿ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದಾರೆ.

ಇನ್ನು, ಪ್ರತೀ ವರ್ಷವು ನವಶಕ್ತಿ ಫ್ರೆಂಡ್ಸ್ ಸರ್ಕಲ್ ನ ಸದಸ್ಯರು ಇಂತಹ ಮಾನವೀಯ ಹಾಗೂ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡು ಪ್ರತಿ ವರ್ಷ ನವರಾತ್ರಿ ಸಂದರ್ಭ ವೇಷ ಹಾಕಿ ಮನೆ ಮನೆಗಳಲ್ಲಿ ಕುಣಿದು ಅದರಲ್ಲಿ ಬಂದ ಹಣವನ್ನು ಬಡ ಕುಟುಂಬಕ್ಕೆ ನೀಡುತ್ತಾ ಬಂದಿರುತ್ತಾರೆ.

ಈ ಬಾರೀಯೂ ಕೂಡ ಈ ಯುವಕರ ಈ ತಂಡ ವೇಷ ಹಾಕಿ ಕುಣಿದು ನಿಧಿ ಸಂಗ್ರಹಿಸಿದ್ದು ಈ ಯುವಕರ ಸಮಾಜಮುಖಿ ಕಾರ್ಯಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version