ಪತ್ತನಂತಿಟ್ಟ: ಕಾರು -ಟ್ರಕ್ ನಡುವಿನ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಅಂಶಗಳು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಈ ಅಪಘಾತದಲ್ಲಿ ಅಲಪ್ಪುಳದ ನೂರನಾಡ್‌ನ ಶಿಕ್ಷಕಿ ಅನುಜಾ ರವೀಂದ್ರನ್(37) ಆಕೆಯ ಸ್ನೇಹಿತ ಹಾಶಿಮ್ (31) ಮೃತಪಟ್ಟಿದ್ದಾರೆ.
ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಅನುಜಾ ಹಾಗೂ ಖಾಸಗಿ ಬಸ್ ಚಾಲಕನಾಗಿದ್ದ ಹಾಶಿಮ್ ಇಬ್ಬರು ಕೂಡ ಪರಿಚಯಸ್ಥರು. ಗುರುವಾರ ಸಂಜೆ(ಮಾ.29 ರಂದು) ಶಾಲಾ ಪ್ರವಾಸದಿಂದ ವಾಪಾಸ್ ಆಗುತ್ತಿದ್ದ ವೇಳೆ ಬಸ್ಸಿಗೆ ತನ್ನ ಕಾರನ್ನು ಅಡ್ಡ ನಿಲ್ಲಿಸಿದ ಹಾಶಿಮ್ ಬಸ್ ಯೊಳಗೆ ತೆರಳಿ ಅನುಜಾ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಅನುಜಾ, ಹಾಶಿಮ್ ನನ್ನು ಈತ ನನ್ನ ಸಹೋದರ ಸಂಬಂಧಿ, ಈತನ ಹೆಸರು ವಿಷ್ಣು ಎಂದು ಸಹದ್ಯೋಗಿಗಳಿಗೆ ಪರಿಚಯ ಮಾಡಿಕೊಂಡು ಅಲ್ಲಿಂದ ತೆರಳಿದ್ದಾರೆ.
ಇದಾದ ಬಳಿಕ ಕಾರಿನಲ್ಲಿ ಹಾಶಿಮ್ ಹಾಗೂ ಅನುಜಾ ತೆರಳಿದ್ದಾರೆ. ಕೆಲ ಸಮಯದ ಬಳಿಕ ಅನುಜಾರಿಗೆ ಅವರ ಸಹದ್ಯೋಗಿಗಳು ಕರೆ ಮಾಡುತ್ತಾರೆ. ಈ ವೇಳೆ ಅನುಜಾ ಅಳುತ್ತಾ ತಾನು ವಿಷ್ಣು(ಹಾಶಿಮ್) ಜತೆ ಜೀವನವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ಹೇಳಿ ಪೋನ್ ಕಟ್ ಮಾಡಿದ್ದಾರೆ. ಇದನ್ನು ಕೇಳಿ ಸಂಶಯದಿಂದ ಸಹದ್ಯೋಗಿ ಅನುಜಾಳ ಮನೆಗೆ ಹಾಗೂ ಅವರ ಪತಿಗೆ ಮಾಹಿತಿ ನೀಡಿದ್ದಾರೆ.
ಈ ವಿಚಾರವನ್ನು ಪೊಲೀಸರಿಗೆ ಹೇಳಿದಾಗ, ಪೊಲೀಸರು ಅನುಜಾಳ ಮೊಬೈಲ್ ಪತ್ತೆ ಹಚ್ಚಲು ಯತ್ನಿಸಿದ್ದಾರೆ. ಆದರೆ ಈ ವೇಳೆಗೆ ಅನುಜಾ – ಹಾಶಿಮ್ ತೆರಳುತ್ತಿದ್ದ ಕಾರು – ಟ್ರಕ್ ವೊಂದಕ್ಕೆ ಢಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತ ಘಟನೆಯಲ್ಲಿ ಅನುಜಾ ಸ್ಥಳದಲ್ಲೇ ಜೀವ ಬಿಡುತ್ತಾರೆ. ಗಂಭೀರ ಗಾಯಗೊಂಡ ಹಾಶಿಮ್ ಆಸ್ಪತ್ರೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.
ಅಪಘಾತಕ್ಕೂ ಮುನ್ನ ನಡೆದಿತ್ತಾ ಆತ್ಮಹತ್ಯೆ ಪ್ಲ್ಯಾನ್? : ಮೊದಲಿಗೆ ಇದೊಂದು ಅಪಘಾತ ಪ್ರಕರಣವೆಂದು ದೂರು ದಾಖಲಿಸಿದ ತನಿಖೆ ಆರಂಭಿಸಿದ ಪೊಲೀಸರಿಗೆ ಮುಂದೆ ಸಾಗುತ್ತಿದ್ದಂತೆ ಕೆಲವೊಂದು ವಿಚಾರಗಳು ಬೆಳಕಿಗೆ ಬಂದಿದೆ. ಖುಷಿಯಿಂದಲೇ ಬಸ್ಸಿನಿಂದ ಇಳಿದ ಅನುಜಾ ಇದ್ದಕ್ಕಿದ್ದಂತೆ ಸಾಯುತ್ತೇನೆ ಎನ್ನುವ ಮಾತುಗಳನ್ನು ಆಡಿದ್ದೇಕೆ ಎನ್ನುವ ಪ್ರಶ್ನೆಯೊಂದು ತನಿಖೆ ವೇಳೆ ಬರುತ್ತದೆ. ಇದಲ್ಲದೆ ಕಾರಿನಲ್ಲಿ ಮದ್ಯದ ಬಾಟಲಿ ಕೂಡ ಪತ್ತೆ ಯಾಗಿದೆ.
ಕಾರು ಚಾಲಕ ಬೇಕಂತಲೇ ವೇಗವಾಗಿ ರಾಂಗ್ ಸೈಡ್ ನಿಂದ ಬಂದು ಟ್ರಕ್ ಗೆ ಢಿಕ್ಕಿ ಹೊಡೆದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಹೇಳಿದ್ದಾರೆ. ಅನುಜಾ ಕುಟುಂಬದಲ್ಲಿ ವಿಷ್ಣು ಎನ್ನುವ ವ್ಯಕ್ತಿಯೇ ಇಲ್ಲ ಎಂದು ಕುಟುಂಬಸ್ಥರು ಪೊಲೀಸರಲ್ಲಿ ಹೇಳಿದ್ದಾರೆ.
ಹಾಶಿಮ್ – ಅನುಜಾ ನಡುವೆ ಸಂಬಂಧವಿದ್ದಿರಬಹುದೆಂದು ಶಂಕಿಸಲಾಗಿದೆ. ಸದ್ಯ ಇಬ್ಬರ ಮೊಬೈಲ್ ಫೋನ್ ಸಂಪೂರ್ಣವಾಗಿ ಹಾನಿಯಾಗಿದ್ದು, ಅದರಲ್ಲಿದ್ದ ಅಂಶ ಬಯಲಿಗೆ ಬಂದ ಬಳಿಕವಷ್ಟೇ ಘಟನೆ ಹಿಂದಿನ ಕಾರಣ ತಿಳಿದು ಬರಬಹುದು ಎನ್ನಲಾಗಿದೆ. ಕಳೆದ ನಾಲ್ಕು ವರ್ಷದಿಂದ ಅನುಜಾ ಹಾಗೂ ಹಾಶಿಮ್ ಆತ್ಮೀಯವಾಗಿದ್ದರು ಎನ್ನಲಾಗಿದೆ.
ಬೇಕಂತಲೇ ಟ್ರಕ್ ಗೆ ಕಾರು ಢಿಕ್ಕಿ ಹೊಡೆದ ಚಾಲಕ?
ಈ ಸಂಬಂಧ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿದ್ದು, ಅಪಘಾತಕ್ಕೀಡಾದ ಕಾರನ್ನು ಪರಿಶೀಲಿಸಿದ್ದಾರೆ. ಕಾರು ಚಲಾಯಿಸುತ್ತಾ, ಟ್ರಕ್ ಗೆ ಢಿಕ್ಕಿ ಹೊಡೆಯುವ ವೇಳೆ ಚಾಲಕ ಬ್ರೇಕ್ ಹಾಕಿಲ್ಲ. ಇಬ್ಬರು ಸೀಟ್ ಬೆಲ್ಟ್ ನ್ನು ಕೂಡ ಧರಿಸಿರಲಿಲ್ಲ ಎಂದು ಅಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅನುಜಾರ ಪತ್ನಿ ಉದ್ಯಮಿಯಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ಇನ್ನು ಹಾಶಿಮ್ ಮೂರು ವರ್ಷದಿಂದ ಪತ್ನಿಯಿಂದ ದೂರವಾಗಿದ್ದರು ಎಂದು ವರದಿ ತಿಳಿಸಿದೆ.