Site icon newsroomkannada.com

‘ವಿಘ್ನ ವಿನಾಶಕ’ನ ಹಬ್ಬ ಆಚರಣೆಗೇ ‘ರಜೆ ವಿಘ್ನ’ – ಚೌತಿಗೆ ಸಾರ್ವತ್ರಿಕ ರಜೆ ಯಾವಾಗ?

(Representative Image Used)

ಮಂಗಳೂರು: ವಿಘ್ನ ವಿನಾಶಕನನ್ನು ಆರಾಧಿಸುವ ಹಬ್ಬವಾಗಿರುವ ಗಣೇಶ ಚೌತಿ (Ganesh Chaturthi) ದೇಶದೆಲ್ಲೆಡೆ ಸಾರ್ವತ್ರಿಕವಾಗಿ ಆಚರಿಸುವ ದೊಡ್ಡ ಹಬ್ಬ. ವಿಘ್ನ ವಿನಾಶಕ ಗಣಪನ ಆರಾಧನೆಗೆ ಎಲ್ಲೆಡೆ ಸಿದ್ಧತೆ ಭರದಿಂದ ಸಾಗಿದ್ದು, ಗಣೇಶ ಮೂರ್ತಿ ರಚನೆ ಸಹಿತ ಚೌತಿ ಹಬ್ಬದ ತಯಾರಿ ಜೋರಾಗಿಯೇ ಸಾಗುತ್ತಿದೆ.

ಆದರೆ, ಈ ಸಂಭ್ರಮದ ನಡುವೆಯೇ ಈ ಬಾರಿ ರಾಜ್ಯ ಸರಕಾರ ಪ್ರಕಟಿಸಿರುವ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಚೌತಿ ಆಚರಣೆಗೆ ನೀಡಿರುವ ರಜಾ ದಿನಾಂಕ ಗೊಂದಲಕ್ಕೆ ಕಾರಣವಾಗಿದೆ.  ಈ ಬಾರಿಯ ಗಣೇಶ ಚತುರ್ಥಿ ಆಚರಿಸುವ ಸಾರ್ವತ್ರಿಕ ರಜೆಯಲ್ಲಿ ಕ್ಯಾಲೆಂಡರ್ ನಲ್ಲೇ ಗೊಂದಲವಿದ್ದು, ಒಂದು ದಿನ ಮುಂಚಿತವಾಗಿ ಸಾರ್ವತ್ರಿಕ ರಜೆ ಇರಲಿದೆ!

ಈ ಬಾರಿ ಕರಾವಳಿ (Karavali) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 19ರಂದು ಗಣೇಶ ಹಬ್ಬವಿದ್ದು, ಆದರೆ ರಾಜ್ಯ ಸರಕಾರ ಪ್ರಕಟಿಸಿರುವ ರಜೆ ಪಟ್ಟಿಯಲ್ಲಿ ಚೌತಿ ರಜೆಯನ್ನು ಸೆ.18 ಎಂದು ಉಲ್ಲೇಖವಾಗಿದೆ.

ಹೀಗಾಗಿ, ರಾಜ್ಯ ಸರಕಾರಿ ನೌಕರರು ಕರ್ತವ್ಯ ಮಾಡುತ್ತಲೇ ಚೌತಿ ಹಬ್ಬವನ್ನು ಆಚರಿಸಬೇಕಾದ ಮತ್ತು ವಿದ್ಯಾರ್ಥಿಗಳು ಹಬ್ಬದ ದಿನದಂದೂ ಶಾಲಾ-ಕಾಲೇಜುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲೂ ಹಲವರಿಂದ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ಸರಕಾರ ಪ್ರಕಟಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವೃತ ರಜೆ ಎಂದಿದೆ. ಪಂಚಾಂಗ ಪ್ರಕಾರ ಸೆ.18ರಂದು ಗೌರಿ ತದಿಗೆ, ಗಣೇಶ ಚತುರ್ಥಿ ಸೆ.19ರಂದು ಇದೆ. ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಕಾರಣದಿಂದ ರಜೆಯ ವಿಚಾರ ಇದೀಗ ಗೊಂದಲಕ್ಕೆ ಕಾರಣವಾಗಿದೆ.

ಇನ್ನು, ಶಾಸ್ತ್ರ ಪ್ರಕಾರದಲ್ಲೂ ಗಣೇಶ ಚತುರ್ಥಿ ಘಳಿಗೆ ಬೆಳಗ್ಗಿನ ಸೂರ್ಯೋದಯದ ಹೊತ್ತು ಆಗಿದ್ದರೆ, ಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿಯ ಘಳಿಗೆ ಮಧ್ಯರಾತ್ರಿಯಾಗಿರುತ್ತದೆ. ಈ ಲೆಕ್ಕಾಚಾರವನ್ನು ತಾಳೆ ಹಾಕಿದಾಗ ಸೆ.18ರ ಬೆಳಗ್ಗೆ ತದಿಗೆ ತಿಥಿಯಾದರೆ, ಮಧ್ಯಾಹ್ನ 12.38 ರಿಂದ ಚೌತಿ ಆರಂಭವಾಗಿ, ಸೆ.19ರ ಮಧ್ಯಾಹ್ನ 1.42 ರವರೆಗೆ ಈ ಘಳಿಗೆ ಇದೆ. ಸೆ.19ರ ಸೂರ್ಯೋದಯ ಘಳಿಗೆ 6.21 ಆಗಿದ್ದು ಈ ದಿನವೇ ಭಾದ್ರಪದ ಚೌತಿ ದಿನವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತವನ್ನು ಸಂಪರ್ಕಿಸಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಕೋರಿದ್ದಾರೆ.

ಆದರೆ ‘ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದು ಈ ವಿಚಾರವಾಗಿ ಇನ್ನೂ ಯಾವುದೇ ಸೂಕ್ತ ನಿರ್ಧಾರ ಕೈಗೊಂಡಿಲ್ಲ.

ಒಂದುವೇಳೆ, ಸರಕಾರ ಈ ರಜಾದಿನವನ್ನು ಬದಲು ಮಾಡದಿದ್ದಲ್ಲಿ ಪ್ರತಿಪಕ್ಷ ಬಿಜೆಪಿ (BJP) ಮತ್ತು ರಾಜ್ಯದ್ಲಲ್ಲಿನ ಹಿಂದು ಸಂಘಟನೆಗಳು (Hindu Organization) ಈ ವಿಚಾರವನ್ನು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೊಂದು ‘ಅಸ್ತ್ರ’ ಮಾಡಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ!

Exit mobile version