ಬಂಟ್ವಾಳ: ಬೇಂಕ್ಯ ಸುಭಾಶ್ ಯುವಕ ಮಂಡಲದ ಆಶ್ರಯದಲ್ಲಿ ಶ್ರೀ ಶಾರದಾ ಪೂಜಾ ಸಮಿತಿಯ ವತಿಯಿಂದ 97ನೇ ವರ್ಷದ ಶಾರದಾ ಪೂಜಾ ಕಾರ್ಯಕ್ರಮವು ಈ ಬಾರಿ ನಾಲ್ಕು ದಿನಗಳ ಕಾಲ ಸಜೀಪಮೂಡ ಬೇಂಕ್ಯ ಶಾಲೆಯಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಈ ಹಿನ್ನಲೆಯಲ್ಲಿ ಇಂದು (ಸೆ.10) ಮೂರು ಹಂತದ ಸಿದ್ಧತ ಸಭೆ ನಡೆಯಿತು. ಶಾರದ ನಗರ ಮಂದಿರದಲ್ಲಿ ನಡೆದ ಎರಡನೇ ಹಂತದ ಸಭೆಯಲ್ಲಿ ತಾಯಿ ಶಾರದೆಯ ಶೋಭಯಾತ್ರೆಯ ಕುರಿತಾಗಿ ಚರ್ಚೆ ನಡೆದುಸಭೆಯಲ್ಲಿದ್ದವರು ತಮ್ಮ ತಮ್ಮ ಸಲಹೆಗಳನ್ನು ನೀಡಿದರು.
ಈ ಸಭೆಯಲ್ಲಿ ಪ್ರಮುಖವಾಗಿ ಶೋಭಾಯಾತ್ರೆಯ ಮಾರ್ಗ ಬದಲಾವಣೆ ಕುರಿತಾಗಿಯೂ ಚರ್ಚೆ ಕೂಡ ನಡೆಯಿತು.
ಆ ಬಳಿಕ ಸಂಘದ ಹಿರಿಯರು ಹಾಗೂ ಅಧ್ಯಕ್ಷರು, ‘ತಾಯಿ ಶಾರದೆಗೆ ಶೋಭಯಾತ್ರೆಯ ಮಾರ್ಗ ಬದಲಾವಣೆಯ ಒಪ್ಪಿಗೆ ಇದೆಯಾ..?’ ಎಂದು ಮಂಗಳಾದೇವಿ ದೇವಸ್ಥಾನದಲ್ಲಿ ಗಣೇಶ್ ಐತಾಳ್ ಅವರಲ್ಲಿ ತಾಂಬೂಲ ಪ್ರಶ್ನೆ ಇರಿಸಿದ್ದು, ಈ ಸಂದರ್ಭ ತಾಯಿ ಶಾರದೆಗೆ ಮಾರ್ಗ ಬದಲಾವಣೆಯ ಒಪ್ಪಿಗೆ ಇಲ್ಲ ಎಂದು ಪ್ರಶ್ನೆಯಲ್ಲಿ ಕಂಡು ಬಂದಿದ್ದು,’ಇಷ್ಟು ವರ್ಷ ಯಾವ ಮಾರ್ಗದಲ್ಲಿ ತಾಯಿ ಶಾರದೆಯ ಮೆರವಣಿಗೆ ಸಾಗುತ್ತಿತ್ತೋ ಅದೇ ದಾರಿಯಲ್ಲೇ ನನ್ನ ಶೋಭಾಯಾತ್ರೆ ನಡೆಯಲಿ..’ ಎಂದು ತಾಯಿ ಶಾರದೆ ತಾಂಬೂಲ ಪ್ರಶ್ನೆಯಲ್ಲಿ ಸೂಚಿಸಿದ್ದಾಳೆ ಎಂದು ಕಂಡುಬಂತು.
ಹೀಗಾಗಿ, ಇಂದು ನಡೆದ ಮೂರನೇ ಹಂತದ ಸಭೆಯಲ್ಲಿ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದ ಹಾಗೆ ಈ ಮೊದಲಿನಂತೆ ಶೋಭಾಯಾತ್ರೆ ನಡೆಯುತ್ತಿದ್ದ ಮಾರ್ಗದಲ್ಲೇ ಈ ಬಾರಿಯೂ ಶೋಭಾಯಾತ್ರೆ ಸಾಗಲಿ ಎಂದು ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ತೀರ್ಮಾನಿಸಿದ್ದಾರೆ.
ಈ ಸಂದರ್ಭ ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ವಸಂತ್ ಕುಮಾರ್ ಬರ್ಕೆ, ಮಾಜಿ ಅಧ್ಯಕ್ಷರಾದ ಶ್ರೀನಾಥ ಶೆಟ್ಟಿ, ಪಂಚಾಯತ್ ಸದಸ್ಯರಾದ ಯೋಗೀಶ್ ಬೆಳ್ಚಾಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜಾ, ಸದಾನಂದ ಶೆಟ್ಟಿ,ಪ್ರಹ್ಲಾದ್ ಬೇಂಕ್ಯ ಹಾಗೂ ಸಂಘದ ಸದಸ್ಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.