ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ – ಬಾಲಕಿಯರ ಫುಟ್ಬಾಲ್ ಪಂದ್ಯಾಟ ಉದ್ಘಾಟನೆ
ಮಂಗಳೂರು: ‘ಪಂದ್ಯದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ, ಕ್ರೀಡಾಕೂಟ ಹಬ್ಬದ ವಾತಾವರಣದಲ್ಲಿ ನಡೆಯುತ್ತಿದ್ದು ಸಂಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದೆ..’ ಎಂದು ಬಿ.ಎಂ. (BM School) ಶಾಲೆಯ ಸಂಚಾಲಕ ಎಸ್.ಎಸ್. ಸಾಲಿನ್ ಅಭಿಪ್ರಾಯಪಟ್ಟರು.
ಉಳ್ಳಾಲ (Ullala) ಬಿ.ಎಂ.ಶಾಲೆಯ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ (Nehru Maidan) ಸೆ.15 ಮತ್ತು ಸೆ.16ರಂದು ಎರಡು ದಿನಗಳ ಕಾಲ ನಡೆಯಲಿರುವ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ -ಬಾಲಕಿಯರ ಫುಟ್ಬಾಲ್ ಪಂದ್ಯಾಟವನ್ನು (Football Tournament) ಶುಕ್ರವಾರ (ಸೆ.15) ಉದ್ಘಾಟಿಸಿ ಬಳಿಕ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಮಾತನಾಡಿ, ‘ಜೀವನದಲ್ಲಿ ಏನೇ ಪಡೆಯಬೇಕಾದರೂ ಸತತ ಪ್ರಯತ್ನ ಅಗತ್ಯ, ಪ್ರಸ್ತುತ ದಿನಗಳಲ್ಲಿ ಕ್ರಿಕೆಟ್, ಫುಟ್ಬಾಲ್ ಸಹಿತ ಇತರ ಆಟಗಳು ಮೊಬೈಲ್ ಗೆ ಸೀಮಿತಗೊಳಿಸದೆ ಮೈದಾನದಲ್ಲಿಆಡಿ ಸ್ನಾಯುಗಳನ್ನು ಗಟ್ಟಿಗೊಳಿಸಬೇಕು, ಜೊತೆಗೆ ದೈಹಿಕ ಆರೋಗ್ಯ ಕಾಪಾಡಬಹುದು..’ ಎಂದು ತಿಳಿಸಿದರು.
ಈ ಸಂದರ್ಭ ಕ್ರೀಡಾ ಸಾಧಕರಾದ ಬಿ.ಎಂ.ಅಸ್ಲಂ, ಅಝಾದ್, ಡಾ.ಪ್ರಕಾಶ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು.
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಎಸ್., ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆಎಂಕೆ ಮಂಜನಾಡಿ, ನೋಡೆಲ್ ಅಧಿಕಾರಿ ಪ್ರಮೋದ್, ಉಮೇಶ್ ಉಚ್ಚಿಲ್, ದೈಹಿಕ ಶಿಕ್ಷಣ ಶಿಕ್ಷಕಿ ಜಾನೆಟ್ ಮಾಬೆನ್, ಫುಟ್ಬಾಲ್ ತರಬೇತುದಾರ ಸಾಜಿದ್ ಮೊದಲಾದವರು ಉಪಸ್ಥಿತರಿದ್ದರು.
ಬಿ.ಎಂ.ಶಾಲೆಯ ಮುಖ್ಯಶಿಕ್ಷಕಿ ಜಯವಂತಿ ಸೋನ್ಸ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಯೋಗೀಶ್ ಪಿ. ವಂದಿಸಿದರು. ಶಿಕ್ಷಕಿ ಉಷಾ ಎಂ.ಕಾರ್ಯಕ್ರಮ ನಿರೂಪಿಸಿದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ – ಬಾಲಕಿಯರ ಫುಟ್ಬಾಲ್ ಪಂದ್ಯಾಟಕ್ಕೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯ್ಸ್, ಬಿ.ಎಂ. ಶಾಲೆಯ ಸಂಚಾಲಕ ಎಸ್.ಎಸ್.ಸಾಲಿನ್, ದಕ್ಷಿಣ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಎಸ್., ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಮೋಹನ್ ಶಿರ್ಲಾಲ್ ಇನ್ನಿತರರು ಉಪಸ್ಥಿತರಿದ್ದರು.