ಇಪ್ಪತ್ತೆರಡು ರಾಷ್ಟ್ರ ದಾಟಿ ಕರಾವಳಿಯ ಪುಣ್ಯ ಕ್ಷೇತ್ರಕ್ಕೆ ಆಗಮನ
ಈ ಯಾತ್ರೆಯ ಕಂಪ್ಲೀಟ್ ಡೀಟೈಲ್ ಇಲ್ಲಿದೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರಧ್ದಾ ಭಕ್ತಿಯ ಕೇಂದ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ. ದುರ್ಗೆಯ ಸಾನಿಧ್ಯದ ಜೊತೆಗೆ ಕ್ಷೇತ್ರದ ಗಜರಾಣಿ ಮಹಾಲಕ್ಷ್ಮಿ ಎಲ್ಲರ ಅಚ್ಚುಮೆಚ್ಚು. ಸಾಧು ಸ್ವಭಾವದ ಮಹಾಲಕ್ಷ್ಮಿ ಕ್ರಿಕೆಟ್, ಫುಟ್ಬಾಲ್ ಆಡೋದರಿಂದಲೂ ಭಕ್ತರ ಗಮನವನ್ನು ಸೆಳೆದಿದೆ. ಕರಾವಳಿ ಜನರ ಅಚ್ಚುಮೆಚ್ಚಿ ಮಹಾಲಕ್ಷ್ಮಿಯನ್ನು ಕಾಣಲು ದೂರದ ಸ್ವಿಜರ್ಲ್ಯಾಂಡ್ ದೇಶದಿಂದ ಇಬ್ಬರು ಪ್ರವಾಸಿಗರು ಕಟೀಲು ಕ್ಷೇತ್ರಕ್ಕೆ ಸೈಕಲ್‌ನಲ್ಲಿ ಆಗಮಿಸಿದ್ದಾರೆ. ಸೈಕಲ್‌ನಲ್ಲೇ ಇಪ್ಪತ್ತೆರಡು ರಾಷ್ಟ್ರಗಳನ್ನು ಸುತ್ತಿ ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ..
ಸೈಕಲ್ ನಲ್ಲೇ ಪ್ರಪಂಚ ಸುತ್ತುತ್ತಿರುವ ಇವರ ಹೆಸರು ಕ್ಲಾಡಿಯೋ ಬ್ರಾಂಡ್ಲಿ ಮತ್ತು ಉರ್ಸ್. ಇಪ್ಪತ್ತೆರಡರ ಹರೆಯ ಕ್ಲಾಡಿಯೋ ತನ್ನ ಅಂಕಲ್ ಉರ್ಸ್ ಜೊತೆಗೆ ಸದ್ಯ ಪ್ರಪಂಚ ಪರ್ಯಟನೆಯಲ್ಲಿದ್ದಾರೆ. ಕಳೆದ 2022ರ ಸೆಪ್ಟೆಂಬರ್ ಏಳರಂದು ಸ್ವಿಜರ್ಲ್ಯಾಂಡ್ ನಿಂದ ಸೈಕಲ್ ಪ್ರಯಾಣಿಸಿದ ಇವರು ಮಂಗೋಲಿಯಾ, ಮಧ್ಯ ಏಷ್ಯಾ, ಇರಾನ್, ಒಮಾನ್ ರಾಷ್ಟ್ರಗಳನ್ನು ಕ್ರಮಿಸಿ ಸದ್ಯ ಮಂಗಳೂರಿನ ಕಟೀಲಿನಲ್ಲಿದ್ದಾರೆ.
ಒಮಾನ್ ನಿಂದ ಕೊಚ್ಚಿನ್‌ಗೆ ಆಗಮಿಸಿದ ಇವರು ಕಳೆದ ಎಂಟು ದಿನಗಳಿಂದ ಭಾರತ ಪ್ರವಾಸದಲ್ಲಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಗಜಲಕ್ಷ್ಮಿ ಮಹಾಲಕ್ಷ್ಮಿಯನ್ನು ಕಾಣಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಗೂಗಲ್‌ನಲ್ಲಿ ಮಹಾಲಕ್ಷ್ಮಿಯ ಬಗ್ಗೆ ಅರಿತಿರುವ ಇವರು, ಆನೆಯ ವಿಶೇಷತೆಗಳ ಬಗ್ಗೆ ಸ್ಥಳೀಯರಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ.
ಸೈಕಲ್ ಪ್ರಯಾಣದ ಬಗ್ಗೆ ಕ್ಲಾಡಿಯೋ ಬ್ರಾಂಡ್ಲಿ ಮಾತನಾಡಿ, ನಿಧಾನಗತಿಯ ಪ್ರಯಾಣದಿಂದ ಜನರನ್ನು ತಲುಪಲು ಸಾಧ್ಯ. ಭಾರತದ ಲೋಕಲ್ ರೆಸ್ಟೋರೆಂಟ್ ಗಳಲ್ಲಿ ಆಹಾರ ಸವಿದಿದ್ದೇವೆ. ಭಾರತದ ಜನರು ತುಂಬಾ ಒಳ್ಳೆಯವರು. ಜನರು ತುಂಬಾ ಕೇರ್ ಮಾಡುತ್ತಾರೆ. ಸೈಕಲ್ ನನ್ನ ಬೆಸ್ಟ್ ಫ್ರೆಂಡ್. ಸೈಕಲ್‌ಗೆ ನನ್ನ ಬೆಸ್ಟ್ ಫ್ರೆಂಡ್ ಟಿಂಟನ್‌ನ ಹೆಸರಿಟ್ಟಿದ್ದೇನೆ. ಮುಂದೆ ಬೀಚ್ ಹೌಸ್‌ಗಳಿಗೆ ಹೋಗಿ ನೇಪಾಳದ ಮೂಲಕ ಭಾರತದಿಂದ ಮುಂದಿನ ರಾಷ್ಟ್ರಕ್ಕೆ ಭೇಟಿ ನೀಡುತ್ತೇವೆ ಎಂದು ಹೇಳಿದ್ದಾರೆ. ದೇಶದೊಳಗೆ ರೈಲಿನಲ್ಲಿ ಸಂಚರಿಸುವ ಇವರು ಬಳಿಕ ಸೈಕಲ್‌ನಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ.ಕ ರಾವಳಿ ಯ ಹಲವು ಭಾಗಗಳಿಗೆ ಭೇಟಿ ನೀಡಿ ಖುಷಿ ಪಟ್ಟಿದ್ದಾರೆ.