Site icon newsroomkannada.com

ಸುರತ್ಕಲ್‌: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಮೃತ್ಯು ಆರೋಪ, ಪ್ರತಿಭಟನೆ

ಸುರತ್ಕಲ್ : ರಸ್ತೆ ಅಪಘಾತದಲ್ಲಿ ಕಾಲಿಗೆ ಸಣ್ಣ ಗಾಯಗೊಂಡಿದ್ದ ಬಾಲಕ (16 ವ) ಕುಳಾಯಿ ನಿವಾಸಿ ಅರ್ಫಾನ್ ಎಂಬಾತ ಸುರತ್ಕಲ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತ ಪಟ್ಟಿದ್ದಾನೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.

ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಸ್ಥಳಕ್ಕೆ ಸಿಪಿಐ ಎಂ ಮುಖಂಡರಾದ ಮುನೀರ್ ಕಾಟಿಪಳ್ಳ,ಕಾಂಗ್ರೆಸ್ ಮುಖಂಡರಾದ ಇನಾಯತ್ ಅಲಿ ಡಿವೈಎಫ್ಐ ಮುಖಂಡರಾದ ಬಿ ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ಕಾಂಗ್ರೆಸ್ ಮುಖಂಡ ಪುರುಷೋತ್ತಮ ಚಿತ್ರಾಪುರ ಆಗಮಿಸಿ ಆಕ್ರೋಶಿತರನ್ನು ಸಮಾಧಾನಿಸಿದರು.
ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ನ್ಯಾಯ ಒದಗಿಸಲು ಆಗ್ರಹಿಸಿದರು. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆಯ ಹಿನ್ನಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ. ತಿಮ್ಮಯ್ಯ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ಮುಖಂಡರು, ಮೃತರ ಕುಟುಂಬಸ್ಥರು, ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಮುಖಂಡರ ಬೇಡಿಕೆಯಂತೆ ಪ್ರಕರಣದ ತನಿಖೆಗಾಗಿ ಖಾಸಗಿ ವೈದ್ಯರನ್ನು ಒಳಗೊಂಡ ಎಂಟು ಜನ ತಜ್ಞ ವೈದ್ಯರ ತಂಡವನ್ನು ರಚಿಸುವುದಾಗಿ ಘೋಷಿಸಿದರು. ಕಾಲಮಿತಿಯ ಒಳಗಡೆ ವರದಿ ಪಡೆದು ಕ್ರಮ ಕೈಗೊಳ್ಳುವುದು, ತಪ್ಪಿತಸ್ಥ ವೈದ್ಯರ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version