ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ ಭಾರತ ಮಾತ್ರವಲ್ಲದೇ ವಿಶ್ವಾದ್ಯಂತ ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ ಮಾತ್ರವಲ್ಲದೇ ಬಾಕ್ಸ್ ಆಫೀಸಿನಲ್ಲೂ ಕಲೆಕ್ಷನ್ ಕಮಾಲ್ ಮಾಡ್ತಿದೆ.
ತಮಿಳು ಸಿನೆಮಾಗಳ ಕಲೆಕ್ಷನ್ ದಾಖಲೆ ಪಟ್ಟಿಯಲ್ಲಿ ಜೈಲರ್ ಕಲೆಕ್ಷನ್ ಕೇವಲ ಒಂಭತ್ತೇ ದಿನದಲ್ಲಿ ಟಾಪ್ ಸ್ಥಾನಕ್ಕೇರಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಸಿನೆಮಾ ಒಂಭತ್ತು ದಿನಗಳಲ್ಲಿ 400 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ.
ರಜನಿಕಾಂತ್ ಜೊತೆಗೆ ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್ ನಟಿಸಿರುವ ‘ಜೈಲರ್’ ಈಗಾಗಲೆ ಕಮಲ್ ಹಾಸನ್ ಅಭಿನಯದ ‘ವಿಕ್ರಮ್’ ಸಿನೆಮಾದ ಸಾರ್ವಕಾಲಿಕ ದಾಖಲೆಯನ್ನು ಉಡೀಸ್ ಮಾಡಿದೆ.
ಕೇವಲ ಒಂಭತ್ತು ದಿನಗಳಲ್ಲಿ 468 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿರುವ ಜೈಲರ್ ಭಾನುವಾರ 500 ಕೋಟಿ ರೂಪಾಯಿಗಳ ಮೈಲುಗಲ್ಲನ್ನು ಕ್ರಾಸ್ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಸಿನಿ ಪಂಡಿತರಿದ್ದಾರೆ.
ಸದ್ಯದ ಮಟ್ಟಿಗೆ ವಿಶ್ವಾದ್ಯಂತ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಕಾಲಿವುಡ್ ಸಿನೆಮಾಗಳ ಸಾಲಿನಲ್ಲಿ ‘ಜೈಲರ್’ ಮೂರನೇ ಸ್ಥಾನದಲ್ಲಿದೆ.
ಇನ್ನು, ತಮಿಳುನಾಡಿನಾದ್ಯಂತ ‘ಜೈಲರ್’ ಕಲೆಕ್ಷನ್ ರೂ. 131 ಕೋಟಿ ದಾಟಿದ್ದು, ಭಾನುವಾರ ಈ ಕಲೆಕ್ಷನ್ 150 ಕೋಟಿ ರೂಪಾಯಿಗಳನ್ನು ದಾಟುವ ನಿರೀಕ್ಷೆಯಿದೆ. ಇದು ಸಾಧ್ಯವಾದರೆ ತಮಿಳುನಾಡಿನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಇದಾಗಲಿದೆ.
ಆದರೆ ತಮಿಳುನಾಡಿನಲ್ಲಿ ‘ವಿಕ್ರಮ್’ ಚಿತ್ರದ ಗಳಿಕೆಯನ್ನು ‘ಜೈಲರ್’ ಮುರಿದರೂ ‘ಪೊನ್ನಿಯನ್ ಸೆಲ್ವನ್ – ಭಾಗ 1ರ ಕಲೆಕ್ಷನ್ ಮೀರಿಸುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ.
ಜೈಲರ್ ಜೈತಯಾತ್ರೆ ಇಷ್ಟಕ್ಕೇ ಮುಗಿದಿಲ್ಲ, ಕೇರಳದಲ್ಲೂ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಚಿತ್ರವೆಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದ್ದು, ಕರ್ನಾಟಕ ಮತ್ತು ಆಂಧ್ರ-ತೆಲಂಗಾಣಗಳಲ್ಲೂ ಜೈಲರ್ ಅಬ್ಬರ ಜೋರಾಗಿಯೇ ಇದೆ. ಇನ್ನು, ವಿದೇಶದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ತಮಿಳು ಚಿತ್ರಗಳಲ್ಲಿ ‘ಜೈಲರ್’ ಮೂರನೇ ಸ್ಥಾನದಲ್ಲಿದೆ.
ವರ್ಲ್ಡ್ ವೈಡ್ ಅತೀ ಹೆಚ್ಚು ಕಲೆಕ್ಷನ್ ಮಾಡಿರುವ ಟಾಪ್-5 ತಮಿಳು ಚಿತ್ರಗಳು:
2.0 : 665 ಕೋಟಿ ರೂಪಾಯಿ
ಪೊನ್ನಿಯನ್ ಸೆಲ್ವನ್ : 496 ಕೋಟಿ ರೂ.
ಜೈಲರ್ : 448 ಕೋಟಿ ರೂ. (09 ದಿನಗಳಲ್ಲಿ)
ವಿಕ್ರಮ್ : 430 ಕೋಟಿ ರೂ.
ಪೊನ್ನಿಯನ್ ಸೆಲ್ವನ್ ಭಾಗ-2 : 346 ಕೋಟಿ ರೂ.