ಬೆಂಗಳೂರು: ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಸಾಹಸ ನಿರ್ದೇಶನ ಮಾಡಿದ್ದ ಜಾಲಿ ಬಾಸ್ಟಿನ್ ಹಠಾತ್ ಹೃದಯಘಾತದಿಂದ ಮಂಗಳವಾರ (ಡಿಸೆಂಬರ್ 26) ನಿಧನ ಹೊಂದಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆ ಅನೇಕರಿಗೆ ದುಃಖ ತಂದಿದೆ. ‘ಪ್ರೇಮಲೋಕ , ‘ಮಾಸ್ಟರ್ ಪೀಸ್’ ಸೇರಿ ನೂರಾರು ಸಿನಿಮಾಗಳಿಗೆ ಅವರು ಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.
ಜಾಲಿ ಅವರು ಹುಟ್ಟಿದ್ದು 1966ರಲ್ಲಿ. ಕೇರಳದ ಅಲೆಪ್ಪೆಯಲ್ಲಿ ಅವರು ಜನನ ಆಯಿತು. ಆದರೆ, ಅವರು ಬೆಳೆದಿದ್ದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿನಲ್ಲೇ ಶಿಕ್ಷಣ ಪಡೆದರು. ಬೈಕ್ ಮೆಕಾನಿಕ್ ಆಗಿ ಜಾಲಿ ಬಾಸ್ಟಿನ್ ವೃತ್ತಿ ಆರಂಭಿಸಿದರು. ಅವರನ್ನು ಗುರುತಿಸಿದ ಕೆಲವರು ಸ್ಟಂಟ್ಮನ್ ಆಗಿ ಚಿತ್ರರಂಗಕ್ಕೆ ಪರಿಚಯಿಸಿದರು. ‘ಪ್ರೇಮಲೋಕ’ ಚಿತ್ರದಲ್ಲಿ ರವಿಚಂದ್ರನ್ ಅವರಿಗೆ ಡ್ಯೂಪ್ ಹಾಕಿದರು. ಆಗ ಅವರಿಗೆ 17 ವರ್ಷ ವಯಸ್ಸು. ಸಾಹಸ ಕಲಾವಿದನಾಗಿ, ಸಾಹಸ ನಿರ್ದೇಶಕನಾಗಿ ಕೆಲಸ ಮಾಡಿದ ಜಾಲಿ ಅವರು ಈವರೆಗೆ 900ಕ್ಕೂ ಅಧಿಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ‘ನಿನಗಾಗಿ ಕಾದಿರುವೆ’ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಒಂದು ಕಾಲಕ್ಕೆ ಅತಿಹೆಚ್ಚು ಸಂಭಾವನೆ ಪಡೆಯೋ ಸಾಹಸ ನಿರ್ದೇಶಕ ಎಂಬ ಹೆಗ್ಗಳಿಕೆ ಅವರಿಗೆ ಇತ್ತು. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ಸಾಹಸ ನಿರ್ದೇಶಕನಾಗಿ ಜಾಲಿ ಬಾಸ್ಟಿನ್ ಹೆಸರು ಮಾಡಿದ್ದರು.