ಉಳ್ಳಾಲ: ಹರೇಕಳ ನ್ಯೂಪಡ್ಪು ಶಾಲೆಯ ಆವರಣ ಗೋಡೆಯ ಗೇಟು ಬಿದ್ದು ಸಾವಿಗೀಡಾದ ಮೂರನೇ ತರಗತಿಯ ವಿದ್ಯಾರ್ಥಿನಿ ಶಾಝಿಯಾ ಭಾನು ಅವರ ಕುಟುಂಬಕ್ಕೆ ಸರಕಾರ ಪಾಕೃತಿಕ ವಿಕೋಪ ಪರಿಹಾರ ನಿಧಿಯಡಿ 5 ಲಕ್ಷ ರೂ. ಮಂಜೂರು ಮಾಡಿದೆ.
ಪದ್ಮಶ್ರೀ ಹಾಜಬ್ಬರಿಂದ ಗುರುತಿಸಲ್ಪಟ್ಟ ನ್ಯೂಪಡ್ಪುವಿನ ಸರ್ಕಾರಿ ಪ್ರಾಥಮಿಕ ಶಾಲಾ ಗೇಟು ಮೇ.20ರಂದು ಬಿದ್ದು ಬಾಲಕಿ ದಾರುಣವಾಗಿ ಮೃತಪಟ್ಟಿದ್ದಳು. ಅಂದು ಮುಡಿಪು ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳ ಶಿಬಿರದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳಿದ್ದವು. ಶಾಲೆಯ ಸಮೀಪದಲ್ಲೇ ಮನೆ ಹೊಂದಿದ್ದ ಅದೇ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ಶಾಝಿಯಾ ಭಾನು ಶಾಲಾ ಆವರಣದಲ್ಲಿ ಇತರ ಮಕ್ಕಳ ಜೊತೆ ಬಾಲಕಿ ಆಟವಾಡುತ್ತಿದ್ದಾಗ ಶಾಲಾ ಆವರಣ ಗೋಡೆ ಗೇಟಿನ ಸಹಿತ ಕುಸಿದು ಅಲ್ಲೇ ಇದ್ದ ಬಾಲಕಿಯ ಮೇಲೆ ಬಿದ್ದು ಕೈಮುರಿತಕ್ಕೊಳಗಾಗಿದ್ದಲ್ಲದೆ ಕುತ್ತಿಗೆ ಭಾಗಕ್ಕೂ ಗಂಭೀರವಾಗಿ ಗಾಯವಾಗಿತ್ತು.
ಸ್ಪೀಕರ್ ಯು.ಟಿ. ಖಾದರ್ ಅವರ ಶಿಫಾರಸ್ಸಿನ ಮೇರೆಗೆ ಸರ್ಕಾರದಿಂದ ಅನುದಾನ ಮಂಜೂರು ಮಾಡಲಾಗಿದ್ದು ಬಾಲಕಿಯ ತಾಯಿಯ ಖಾತೆಗೆ ಜಮೆ ಆಗಿದೆ ಎಂದು ತಿಳಿದು ಬಂದಿದೆ.