ನವದೆಹಲಿ: ಒಡಿಶಾ ರಾಜ್ಯದ ನಬರಂಗ್ಪುರ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆಯಿತ್ತಿದೆ. ಇಲ್ಲಿನ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 11 ವರ್ಷದ ಬುಡಕಟ್ಟು ವಿದ್ಯಾರ್ಥಿನಿಯ ಮೇಲೆ ಇಬ್ಬರು ಶಿಕ್ಷಕರು ಅತ್ಯಾಚಾರ ನಡೆಸಿರುವ ಹೇಯ ಘಟನೆ ನಡೆದಿದೆ.
ಈ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ನಬರಂಗ್ಪುರ ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆಯುತ್ತಿದೆ. ಸಂತ್ರಸ್ಥೆಗೆ ನ್ಯಾಯ ಸಿಗಬೇಕು ಎಂದು ಪ್ರತಿಪಕ್ಷಗಳು ಕೂಡ ಒತ್ತಾಯಿಸಿವೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 6ನೇ ತರಗತಿಯ ವಿದ್ಯಾರ್ಥಿನಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಬಲವಂತವಾಗಿ ನುಗ್ಗಿದ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಇನ್ನೊಬ್ಬ ಶಿಕ್ಷಕ 11 ವರ್ಷದ ವಿದ್ಯಾರ್ಥಿನಿಯ ಮೇಲೆ ಅಲ್ಲಿಯೇ ಅತ್ಯಾಚಾರ ಮಾಡಿದ್ದಾರೆ. ಬಳಿಕ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನಬರಂಗಪುರದ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ವಿಶೇಷ ನ್ಯಾಯಾಧೀಶರಾದ ಪ್ರಣತಿ ಸಹಾ ಅವರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸಚ್ಚಿದಾನಂದ್ ಸ್ವೈನ್ ಹೇಳಿದ್ದಾರೆ.
ಈ ನಡುವೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒಡಿಶಾ ಮಾನವ ಹಕ್ಕುಗಳ ಆಯೋಗ (OHRC) ನಬರಂಗಪುರದ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (CDMO) ಅವರಿಂದ ವರದಿ ನೀಡುವಂತೆ ಹೇಳಿದೆ. ನಾಲ್ಕು ವಾರಗಳಲ್ಲಿ ವರದಿಯನ್ನು ಸಲ್ಲಿಸುವಂತೆ OHRC ಸಿಡಿಎಂಒ-ಕಮ್-ಪಬ್ಲಿಕ್ ಹೆಲ್ತ್ ಆಫೀಸರ್ (PHO) ಗೆ ನಿರ್ದೇಶನ ನೀಡಿದೆ. ಆಸ್ಪತ್ರೆಯಲ್ಲಿ ಬಾಲಕಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಯೋಗವು ಸಿಡಿಎಂಒಗೆ ತಿಳಿಸಿದೆ.
ನವೆಂಬರ್ 9 ರಂದು ಮಂಗಳವಾರ ಈ ಘಟನೆ ನಡೆದಿದೆ. ಬಾಲಕಿಯ ಹೊಟ್ಟೆಯ ಕೆಳಭಾಗದಲ್ಲಿ ಅತೀವ ನೋವು ಅನುಭವಿಸಿದ್ದು, ಪೋಷಕರಿಗೆ ನಡೆದ ವಿಷಯವನ್ನು ತಿಳಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬಹುದು ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಪೋಷಕರು ಕುಂಡೇಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆಕೆಯ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಇನ್ನೊಬ್ಬ ಶಿಕ್ಷಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಬಂಧಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ನಬರಂಗಪುರ ಎಸ್ಪಿ ರೋಹಿತ್ ವರ್ಮಾ ತಿಳಿಸಿದ್ದಾರೆ.