ಮಂಗಳೂರು: ಸ್ಕೂಟರ್ ಚಲಾಯಿಸುತ್ತಿದ್ದಾಗ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿಯಾಗಿ ಕಾರಣ ತಲೆಗೆ ತೀವ್ರ ಪೆಟ್ಟು ಬಿದ್ದು, ಯುವಕನೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಕುಲಶೇಖರ -ಸ್ಟ್ಯಾನ್ಲಿ- ಸುನೀತಾ ದಂಪತಿ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಟೆರ್ಸನ್ ಡಿಸೋಜ (21 ) ಮೃತಪಟ್ಟವರು. ಗುರವಾರ ರಾತ್ರಿ 10 ಗಂಟೆ ವೇಳೆಗೆ ಕುಲಶೇಖರ ಚರ್ಚ್ ನಲ್ಲಿ ಹೆತ್ತವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆತ ಬಳಿಕ ಪಡೀಲ್ ಪೆಟ್ರೋಲ್ ಪಂಪ್ ಗೆ ಹೋಗಿ ಬರುತ್ತೇನೆಂದು ಬಿಕರ್ನಕಟ್ಟೆಯ ರಸ್ತೆಯಲ್ಲಿ ಹೋಗುವಾಗಲೇ ನಾಯಿ ಮರಿಯೊಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಯತ್ನಿಸಿದ್ದಾನೆ. ಈ ವೇಳೆ ಸ್ಕೂಟರ್ ನೇರವಾಗಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿಯಾಗಿದೆ. ನಂತರ ಆತನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಒಯ್ದಿದ್ದಾರೆ. ತಡರಾತ್ರಿ ಯುವಕ ಮೃತಪಟ್ಟಿದ್ದಾನೆ. ಈ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಕಾಲೇಜು ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಬಿಕರ್ನಕಟ್ಟೆ ರಸ್ತೆ ಬದಿ ನಾಯಿಗಳಿಗೆ ಊಟ ಹಾಕುವುದರಿಂದ ಬೀದಿ ನಾಯಿಗಳ ಉಪಟಳ ಹೆಚ್ಚಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.