ಮಂಗಳೂರು: ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಇಂದು ಬೀದಿ ಬದಿ ವ್ಯಾಪಾರಿಗಳು ಮುತ್ತಿಗೆ ಹಾಕಿದ ಘಟನೆ ನಡೆಯಿತು. ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡದ ಹಿನ್ನೆಲೆ ಈ ಘಟನೆ ನಡೆದಿದೆ.
ಈ ವೇಳೆ ವರ್ಷ ಕಳೆದರೂ ಗುರುತಿನ ಚೀಟಿ ನೀಡದ ಪಾಲಿಕೆ ವಿರುದ್ಧ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದರು. ಗುರುತಿನ ಚೀಟಿ ಮುದ್ರಣಗೊಂಡಿದ್ದು, ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ನೀಡಿದೆ. ಆದರೂ ಚೀಟಿಗಳನ್ನು ಪಾಲಿಕೆ ವಿತರಣೆ ಮಾಡಿಲ್ಲ. ಹಲವು ಬಾರಿ ಪಾಲಿಕೆ ಮುಂದೆ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಡಿವೈಎಫ್ಐ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ದಿಢೀರ್ ಮುತ್ತಿಗೆ ಹಾಕಿ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಆನಂದ್, ಈ ತಿಂಗಳ ಒಳಗೆ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡುವ ಭರವಸೆ ನೀಡಿದರು. 667 ಜನರಿಗೆ ಗುರುತಿನ ಚೀಟಿ, ಪ್ರಮಾಣಪತ್ರ ನೀಡಬೇಕಾಗಿದೆ. ಮೇಯರ್, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡುತ್ತೇವೆ. 30 ರ ಒಳಗಡೆ ಕಾರ್ಯಕ್ರಮ ಆಯೋಜಿಸಿ ಐಡೆಂಟಿಟಿ ಕಾರ್ಡ್, ಪ್ರಮಾಣಪತ್ರ ವಿತರಣೆ ಮಾಡುತ್ತೇವೆ ಎಂದು ಹೇಳಿದರು.
ಇಂದಿನ ನಮ್ಮ ಪ್ರತಿಭಟನೆಗೆ ಸ್ಪಂದಿಸಿರುವ ಪಾಲಿಕೆ ಕಮಿಷನರ್ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ. ಇದೆ 25 ನೇ ತಾರೀಕಿನ ಒಳಗೆ ಗುರುತಿನ ಚೀಟಿ ನೀಡುವ ಭರವಸೆ ನೀಡಿದ್ದಾರೆ. ಇಲ್ಲವಾದಲ್ಲಿ ಉಸ್ತುವಾರಿ ಸಚಿವರು ಪಾಲಿಕೆಗೆ ಭೇಟಿ ನೀಡಿದಾಗ ಪುನಃ ಮುತ್ತಿಗೆ ಹಾಕುತ್ತೇವೆ . ನವೆಂಬರ್ 1 ರಾಜ್ಯೋತ್ಸವದಂದು ಮುತ್ತಿಗೆ ಹಾಕಿ ಕಪ್ಪು ಬಾವುಟ ಹಿಡಿಯುತ್ತೇವೆ. ಇವತ್ತು ನಾವು ಹೋರಾಟವನ್ನ ಹಿಂಪಡೆದಿಲ್ಲ. ನಮ್ಮ ಬೇಡಿಕೆ ಈಡೇರದಿದ್ದರೆ ಇದು ಮುಂದಿನ ಹೋರಾಟದ ಸಿದ್ಧತೆಯಾಗಿರುತ್ತೆ . ಮುಂದಿನ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ. ಸದ್ಯ ಇದು ಮಂಗಳೂರಿಗೆ ಸೀಮಿತವಾಗಿದೆ ರಾಜ್ಯಕ್ಕೆ ವಿಸ್ತರಿಸಲು ಅವಕಾಶ ಮಾಡಿಕೊಡಬೇಡಿ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖ್ಯಸ್ಥ ಇಮ್ತಿಯಾಜ್ ಹೇಳಿದರು.