ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಳಿಕ ಭಾರತೀಯರು ಪ್ರವಾಸಕ್ಕೆ ಮೊದಲು ಆಯ್ದುಕೊಳ್ಳುತ್ತಿದ್ದ ಪ್ರದೇಶ ಮಾಲ್ಡೀವ್ಸ್ ಅನ್ನು ಬಿಟ್ಟು ಲಕ್ಷದ್ವೀಪದತ್ತ ಕಣ್ಣ ಹಾಯಿಸುತ್ತಿದ್ದಾರೆ
ಲಕ್ಷದ್ವೀಪ ಇದೊಂದು ಪ್ರವಾಸಿ ತಾಣ ಜೊತೆಗೆ ಭಾರತದ ಕೇಂದ್ರಾಡಳಿತ ಪ್ರದೇಶ. ಲಕ್ಷದ್ವೀಪವನ್ನು ಹಿಂದೆ ಲಖದೀವ್, ಮಿನಿಕೋಯ್ ಮತ್ತು ಅಮಿನ್ ದಿವಿ ದ್ವೀಪಗಳು ಎಂದು ಕರೆಯಲಾಗುತ್ತಿತ್ತು, ಇದು ಭಾರತದ ನೈಋತ್ಯ ಕರಾವಳಿ ಭಾಗವಾದ ಕೇರಳದ ಅರಬ್ಬೀ ಸಮುದ್ರದಲ್ಲಿ 200 ರಿಂದ 400 ಕಿಲೋ ದೂರದಲ್ಲಿದೆ. 1973ರಲ್ಲಿ ಈ ದ್ವೀಪ ಸಮೂಹಕ್ಕೆ ಲಕ್ಷದ್ವೀಪ ಎಂದು ಹೆಸರಿಡಲಾಗಿತ್ತು. ಇಲ್ಲಿ ಮೂವತ್ತಾರು ಮಧ್ಯಮ ಗಾತ್ರದ ದ್ವೀಪಗಳಿದ್ದು ಇದರಲ್ಲಿ ಕೇವಲ 10 ದ್ವೀಪಗಳು ಮಾತ್ರ ಮಾನವ ವಾಸಕ್ಕೆ ಯೋಗ್ಯವಾಗಿದೆ. ಅಮಿನಿ, ಕಲ್ಪೇನಿ ಆಂಡ್ರೊಟ್, ಕವರಟ್ಟಿ ಮತ್ತು ಅಗತ್ತಿ ಇಲ್ಲಿನ ಅತ್ಯಂತ ಹಳೆಯ ಜನವಸತಿ ದ್ವೀಪಗಳಾಗಿವೆ.
ಕ್ರಿಸ್ತಪೂರ್ವ 1500ರಷ್ಟು ವರ್ಷಗಳ ಹಿಂದೆಯೇ ಲಕ್ಷದ್ವೀಪದಲ್ಲಿ ಮಾನವ ವಾಸವಾಗಿದ್ದ ಎಂಬುದಕ್ಕೆ ಪುರಾವೆಗಳಿವೆ. ಏಳನೇ ಶತಮಾನದಲ್ಲಿ ಮುಸ್ಲಿಂ ಮಿಷನರಿಗಳು ಲಕ್ಷದ್ವೀಪದಲ್ಲಿ ಇದ್ದ ಬಗ್ಗೆ ಗುರುತುಗಳಿವೆ. ಈ ದ್ವೀಪ ಕ್ರಿಸ್ತ ಶಕ 1799 ರವೆಗೆ ಟಿಪ್ಪು ಸುಲ್ತಾನನ ಆಡಳಿತಕ್ಕೆ ಒಳಪಟ್ಟಿತ್ತು. ಅದಾದ ಬಳಿಕ ಬ್ರಿಟೀಷರು ಇಲ್ಲಿ ಅಧಿಪತ್ಯ ಸ್ಥಾಪಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ 1956ರಲ್ಲಿ ಕೇಂದ್ರಾಡಳಿತ ಪ್ರದೇಶವಾಯ್ತು.
ಲಕ್ಷದ್ವೀಪದ ಪ್ರಸ್ತುತ ಆಡಳಿತ ರಾಜಧಾನಿ ಕವರಟ್ಟಿ. ಇದು ಕೇರಳ ಹೈಕೋರ್ಟ್ ಪರಿಧಿಯಲ್ಲಿ ಬರುತ್ತದೆ. 2011ರ ಜನಗಣತಿ ಪ್ರಕಾರ ಲಕ್ಷದ್ವೀಪದಲ್ಲಿ 64,429 ಜನಸಂಖ್ಯೆ ಇದ್ದು, ಇದರಲ್ಲಿ ಶೇಕಡ 96ಕ್ಕೂ ಹೆಚ್ಚು ಮಂದಿ ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ. ಇವರು ಮಲಯಾಳಂ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಪ್ರಸ್ತುತ ಹಿಂದೂಗಳು 2.7%, ಮುಸ್ಲಿಂ 96.58% (62,268 ಮಂದಿ) ಕ್ರೈಸ್ತ 0.49%, ಸಿಖ್ 0.01%, ಬೌದ್ಧ 0.02%, ಜೈನ್ 0.02%, ಇತರ 0.01% ಇದ್ದಾರೆ. ಲಕ್ಷದ್ವೀಪವು ಮೊದಲು ಮುಸ್ಲಿಂ ಪ್ರಾಬಲ್ಯ ಹೊಂದಿರಲಿಲ್ಲ. ಇಲ್ಲಿನ ಜನ ಮೊದಲು ಹಿಂದೂ ಮತ್ತು ಬೌದ್ಧ ಧರ್ಮಗಳನ್ನು ಅನುಸರಿಸುತ್ತಿದ್ದರು.
ಇಲ್ಲಿಯ ಧರ್ಮದ ಬಗ್ಗೆ ಅನೇಕ ಕಥೆಗಳು ಕೂಡ ಇದೆ. ಚೇರ ಸಾಮ್ರಾಜ್ಯದ ಕೊನೆಯ ಅರಸು ಚೇರಮನ್ ಪೆರುಮಾಳ್ ಕಾಲದಲ್ಲಿ ಇಲ್ಲಿ ಕೇರಳ ಮತ್ತು ಮಂಗಳೂರು ಕರಾವಳಿಯಿಂದ ವಲಸೆ ಬಂದು ನೆಲಸಿದ್ದ ಜನರಿದ್ದರು. ಕ್ರಿಸ್ತ ಶಕ 5-6ನೇ ಶತಮಾನದಲ್ಲಿ ಬೌದ್ಧ ಧರ್ಮ ಉಚ್ಚ್ರಾಯ ಸ್ಥಿತಿಯಲ್ಲಿತ್ತು. ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕ್ರಿ.ಶ.661ರಲ್ಲಿ ಅರಬ್ ಸೂಫಿ ಉಬೈದುಲ್ಲಾ ಎಂಬಾತ ಇಲ್ಲಿಗೆ ಭೇಟಿ ನೀಡಿದ್ದ. ಆಗ ಅಲ್ಲಿ ಇಸ್ಲಾಂ ಧರ್ಮವನ್ನು ಪರಿಚಯಿಸಿದ. ಉಬೈದುಲ್ಲಾ ಸಮಾಧಿ ಆಂಡ್ರೊಟ್ ದ್ವೀಪದಲ್ಲಿ ಇಂದಿಗೂ ಇದೆ. ಸುಮಾರು 7ನೇ ಶತಮಾನದಲ್ಲಿ ದ್ವೀಪದಲ್ಲಿ ಇಸ್ಲಾಂ ಧರ್ಮ ಅಸ್ತಿತ್ವ ಪಡೆಯಿತು.
ಅರಬ್ಬರ ವ್ಯಾಪರ ಕೌಶಲ್ಯಕ್ಕೆ ಮಾರು ಹೋದ ಚೇರ ದೊರೆ ಚೇರಮನ್ ಪೆರುಮಾಳ್ ಕ್ರಿ.ಶ 825ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ನಂತರ ರಾಜನ ಅನುಯಾಯಿಗಳು ಸೇರಿ ಬಹುತೇಕರು ಇಸ್ಲಾಂಗೆ ಮತಾಂತರಗೊಂಡ ಪರಿಣಾಮ ಬೌದ್ಧರು ಮತ್ತು ಹಿಂದೂಗಳ ಪ್ರಾಬಲ್ಯ ಕುಂಠಿತವಾಯ್ತು ಎಂದು ಐತಿಹಾಸಿಕ ದಾಖಲೆಗಳಿವೆ. ಇದು ಕೇರಳದಲ್ಲೂ ಇಸ್ಲಾಂ ಧರ್ಮ ಬೆಳವಣಿಗೆಗೆ ನಾಂದಿ ಹಾಡಿತು.