ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಕ್ಷಿಣ ಕನ್ನಡ ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಸರಕಾರಿ ಕರ್ತವ್ಯಲೋಪದ ಆರೋಪದಡಿಯಲ್ಲಿ ಅಮಾನತುಗೊಂಡಿದ್ದ ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ರಾಜ್ಯ ಸರಕಾರ ವಾಪಾಸು ಪಡೆದುಕೊಂಡಿದೆ.
ಈ ಮೂಲಕ ಕರಾವಳಿ ಬಿಜೆಪಿ ಶಾಸಕರ ಒಗ್ಗಟ್ಟಿನ ಹೋರಾಟಕ್ಕೆ ಜಯ ಸಿಕ್ಕಿದೆ.
ಮೂಡಬಿದ್ರೆ ತಾಲೂಕು ಪಂಚಾಯತ್ ಇಓ ದಯಾವತಿ ಅವರ ಅಮಾನತು ಆದೇಶವನ್ನು ವಾಪಾಸು ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿರವರು ಆದೇಶ ಹೊರಡಿಸಿದ್ದಾರೆ. ಇಒ ಅವರಿಗೆ ಸೂಕ್ತ ಎಚ್ಚರಿಕೆಯನ್ನು ನೀಡಿ ಅವರ ಮೇಲಿನ ಅಮಾನತು ಆದೇಶವನ್ನು ವಾಪಾಸು ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಇದೇ ಸಂದರ್ಭದಲ್ಲಿ ಇರುವೈಲ್ ಗ್ರಾಮ ಪಂಚಾಯತ್ ಪಿಡಿಒ ಕಾಂತಪ್ಪ ಅವರ ಅಮಾನತು ಆದೇಶವನ್ನೂ ಸಹ ವಾಪಾಸು ಪಡೆಯಲಾಗಿದೆ.
ಈ ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ವಾಪಾಸು ಪಡೆದುಕೊಳ್ಳುವಂತೆ ಆಗ್ರಹಿಸಿ ಈ ಹಿಂದೆ ಬಿಜೆಪಿ ಶಾಸಕರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ್ದ ಜಿಲ್ಲಾಧಿಕಾರಿಯವರು ಶೀಘ್ರವೇ ಇಬ್ಬರು ಅಧಿಕಾರಿಗಳ ಮೇಲಿನ ಅಮಾನತು ಆದೇಶವನ್ನು ವಾಪಾಸು ಪಡೆಯುವ ಭರವಸೆಯನ್ನು ನೀಡಿದ್ದರು.