newsroomkannada.com

ಬಹುಭಾಷಾ ವಿದ್ವಾಂಸ – ಲೇಖಕ ಉಳಿಯತಡ್ಕದ ಕಮಲಾಕ್ಷರ ‘ಲಕ್ಷ್ಯ’ ಭವ್ಯ ರಾಮ ಮಂದಿರ’

ಕಾಸರಗೋಡು: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭದ ಉತ್ಸಾಹವು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದೆ. ಅದೇ ರೀತಿ ದೇಶದ ಮೂಲೆ ಮೂಲೆಯಲ್ಲಿ ರಾಮ ನಾಮ ಘೋಷಣೆ ಕಂಡುಬರುತ್ತಿದೆ.
ಶ್ರೀರಾಮನಿಗಾಗಿ ಅಯೋಧ್ಯೆ ಯಲ್ಲಿ ಮಂದಿರ ನಿರ್ಮಾಣವಾಗಬೇಕೆಂಬ ಹಂಬಲದ ಈಡೇರಿಕೆಗಾಗಿ ಪಣತೊಟ್ಟ ವರು, ಹರಕೆ ಹೊತ್ತವರು ಅದೆಷ್ಟೋ ಮಂದಿ. ಅಂತಹು ದೊಂದು ಹರಕೆ ಹೊತ್ತು, ಈ ಹರಕೆ ತೀರುವ ಸಮಯ ಬಂತೆಂದು ಸಾರ್ಥಕ ಸಂತೋಷ ಪಡುತ್ತಿರುವವರು ಬಹುಭಾಷಾ ವಿದ್ವಾಂಸ, ಲೇಖಕ ಕಾಸರಗೋಡಿನ ಕಮಲಾಕ್ಷ. ಮಂದಿರ ನಿರ್ಮಾಣದವರೆಗೆ ಗಡ್ಡ ತೆಗೆಯುವುದಿಲ್ಲವೆಂದು ಕೆಲ ವರ್ಷಗಳ ಹಿಂದೆ ಅವರು ಮಾಡಿಕೊಂಡ ಹರಕೆ ಈಗ ಸಂದಾಯವಾಗುವ ಕಾಲ ಬಂದಿದೆ.

ಮುಸ್ಸಂಜೆಗೆ ಕೈಕಾಲು ಮುಖ ತೊಳೆದು ಹಚ್ಚಿಟ್ಟ ದೇವರ ದೀಪದ ಎದುರು ಕುಳಿತು ‘ರಾಮ ರಾಮ ಹೇಳುವುದು’ ಎಂದೇ ಭಜನೆ, ತಟ್ಟಿದ್ದು ಮುಟ್ಟಿದಕ್ಕೆಲ್ಲಾ ಎಲ್ಲರ ಬಾಯಿಯಲ್ಲಿ ಬರುತ್ತಿದ್ದ ‘ರಾಮ ಉದ್ದಾರ, ಇಳಿವಯಸ್ಸಿನಲ್ಲಿ ತನ್ನಮ್ಮನ ತುಟಿಗಳೆರಡರ ನಡುವೆ ಸದಾ, ಸದ್ದಾಗದೆ ನಲಿಯುತ್ತಿದ್ದ ‘ರಾಮರಾಮ ನಾಮ’, ಪೌರಾಣಿಕ ಪರಿವೇಷದಲ್ಲಿ ಬೆಳೆಯುತ್ತಿದ್ದಾಗ ಎಲ್ಲ ಮುಖಗಳಿಂದ ದೊರೆಯುತ್ತಿದ್ದ ರಾಮನ ಅರಿವು. ಇವೆಲ್ಲ ಮುಖ್ಯವಾಗಿ ತನ್ನೊಳಗೆ ರಾಮನ ಬಗ್ಗೆ ಜಿಜ್ಞಾಸೆ ಮೂಡುವುದಕ್ಕೆ ಕಾರಣವಾಯಿತು ಎಂದೆನ್ನುತ್ತಾರೆ ಡಾ. ಕೆ. ಕಮಲಾಕ್ಷ.

ಯಕ್ಷಗಾನ, ಅಧ್ಯಾಪನ, ಓದು, ಲಭ್ಯ ರಾಮಾಯಣ ಗ್ರಂಥಗಳ ಅಭ್ಯಾಸ, ದೇರಾಜೆ ಅವರ ರಾಮಾಯಣ ಮತ್ತು ತಾನೀಗ ಮೂರನೇ ಸಲ ಓದಿ ಸುಖಿಸುತ್ತಿರುವ ‘ತುಲಸೀ ರಾಮಾಯಣ’ ಇವೆಲ್ಲ ತನ್ನೊಳಗೆ ರಾಮನನ್ನು ಪ್ರತಿಷ್ಠಾಪಿಸಿದವು. ರಾಮನೆಂಬ ಪಾತ್ರವೇ ಅಂತ ಹುದು. ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಭವ್ಯ ಮಂದಿರ ದಲ್ಲಿ ಶ್ರೀರಾಮನನ್ನು ಪೂಜಿಸುವಂತಾಗುವುದು ನಮ್ಮ ಬದುಕಿನ ಸೌಭಾಗ್ಯ ವಾಗಿದೆ. ಯಾವುದೇ ದೊಂಬಿ, ಗಲಭೆ, ರಕ್ತಪಾತವಿಲ್ಲದೆ ಇಷ್ಟೊಂದು ಸುಗಮವಾಗಿ ಮಂದಿರ ನಿರ್ಮಾಣವಾಯಿ ತಲ್ಲವೆಂಬುದೇ ಸಂತೋಷ ಆದಷ್ಟು ತ್ವರಿತ ಅಯೋಧ್ಯೆಗೆ ತೆರಳಿರಾಮನನ್ನು ಕಂಡು ಬಳಿಕ ತನ್ನ ಗಡ್ಡ ತೆಗೆಯುವ ಎಂದು ಹೇಳುವಾಗ ಸದಾ ಹೊಳೆಯುವ ಅವರ ಕಣ್ಣಂಚು ಒದ್ದೆಯಾಗಿ ಕಂಠ ಗದ್ಗದಿತರಾಗುತ್ತಾರೆ. ಇನ್ನಷ್ಟು ಇಂಥ ಮನಸುಗಳ ತುಡಿತವು ಶ್ರೀ ರಾಮನ ಕುರಿತ ಆಸೆಯಾಗಿ, ಹಂಬಲ ವಾಗಿ, ಹರಕೆಯಾಗಿ, ವ್ರತವಾಗಿ, ಬದುಕೇ ಆಗಿ ನಿಂತಿವೆಯೋ ಆ ಶ್ರೀರಾಮನೇ ಬಲ್ಲ.

8 ವರ್ಷದ ಸಂಕಲ್ಪ: ಕಮಲಾಕ್ಷ ಅವರು ಈ ಮೊದಲೇ ಗಡ್ಡ ಮೊದಲೇ ಬಿಟ್ಟಿದ್ದರು. ಆದರೆ ಶ್ರೀ ರಾಮಮಂದಿರ ನಿರ್ಮಾಣವಾಗದೇ ಗಡ್ಡ ತೆಗೆಯುವುದಿಲ್ಲವೆಂಬ ಈ ಸಂಕಲ್ಪಕ್ಕೆ 8 ವರ್ಷಗಳಾಗಿದೆ. ಕಮಲಾಕ್ಷರಿಗೆ ಬಾಬ್ರಿ ಮಸೀದಿ ಕೆಡವಿದ ದಿನದಿಂದಲೇ ಪ್ರಭು ಶ್ರೀರಾಮನ ಕುರಿತ ಭಕ್ತಿ ಹೆಚ್ಚಾಗಿತ್ತು. ಆದರೆ ರಾಮನ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡಲು ಆರಂಭಿಸಿದ ಬಳಿಕ ವಿಶ್ವಪ್ರಭು ಶ್ರೀರಾಮನಿಗೆ ಭಾವನಾತ್ಮಕವಾಗಿ ಹತ್ತಿರವಾದರು. ಇದೀಗ ತುಳಸಿ ರಾಮಾಯಣವನ್ನು ಇದೀಗ ಮೂರನೇ ಬಾರಿ ಓದುತ್ತಿದ್ದು, ಅದರ ಪ್ರತಿ ವಿಷಯಗಳನ್ನು ಸೂಕ್ಷ್ಮ, ಸ್ಥೂಲವಾಗಿ ಅಧ್ಯಯನ ಮಾಡುತ್ತಿದ್ದಾರೆ.

ವಿದ್ವಾಂಸರ ಶ್ರೀರಾಮ ಅಧ್ಯಯನ ನಿರಂತರ: ಕಾಸರಗೋಡು ಉಳಿಯತ್ತಡ್ಕದ ಕಮಲಾಕ್ಷ ಅವರು ಪ್ರೊಫೆಸರ್‌ ಆಗಿದ್ದವರು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಕಾಸರಗೋಡಿನ ನಲಂದ ವಿವಿಯಲ್ಲಿ ಪ್ರಾಂಶುಪಾಲರಾಗಿದ್ದರು. ಅಲ್ಲದೆ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾಗಿದ್ದರು. ತುಳು ಸೇರಿದಂತೆ ಹಲವು ಭಾಷೆಯಲ್ಲಿ ಹಲವು ಪುಸ್ತಕ ಸಾಹಿತ್ಯ ರಚಿಸಿ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ್ದಾರೆ.  ಮಲಯಾಳದಿಂದ ಕನ್ನಡಕ್ಕೆ ಹಲವು ಭಾಷಾಂತರ ಕೃತಿ ರಚಿಸಿದ್ದಾರೆ. ಹಲವು ಕಾದಂಬರಿ, ವಿಮರ್ಷಾತ್ಮಕ ಲೇಖನ ಬರೆದಿದ್ದಾರೆ.

ರಾಮನ ಬಗ್ಗೆ ಹಿರಿ ಕಿರಿಯರಿಗೆ ಅರಿವು ಮೂಡಿಸುವ ಸರಳ ಜೀವಿ: ಮದುವೆ, ಶುಭ ಸಮಾರಂಭ ಸೇರಿದಂತೆ ಕುಟುಂಬದ ಹಿರಿಕಿರಿಯರು ಒಟ್ಟುಗೂಡುವ ಸಮಾರಂಭಗಳಲ್ಲಿ ಪ್ರಭು ಶ್ರೀರಾಮನ ಲೀಲೆಗಳನ್ನು ವಿವರಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದಾರೆ ಕಮಲಾಕ್ಷ.

ಶ್ರೀರಾಮನನ್ನು ಕಾಣುವ ತವಕ: ಮಧೂರು ಸಮೀಪದ ಉಳಿಯತಡ್ಕದಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಕಮಲಾಕ್ಷ ಅವರು ನಾನು ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ಕೆ ಹೋಗುವುದಿಲ್ಲ. ಆದರೆ ಪ್ರಾಣಪ್ರತಿಷ್ಠಾಪನಾ ಕಾರ್ಯಗಳೆಲ್ಲವೂ ಮುಗಿದ ಬಳಿಕ ಏಕಾಂತದಲ್ಲಿ ಶ್ರೀರಾಮನನ್ನು ಭಕ್ತಿಯಿಂದ ಮನಸ್ಸಿನಲ್ಲಿ ಆಹ್ವಾನಿಸಿಕೊಂಡು ಯಾತ್ರೆ ಹೋಗಿ ಶ್ರೀರಾಮನನ್ನು ಏಕಾಂತದಲ್ಲಿ ಮನಸಾರೆ ಭಜಿಸುವ ಮಹದಾಸೆಯಿದೆ ಎನ್ನುತ್ತಾರೆ.

ಮಾಹಿತಿ ಒದಗಿಸಿದವರು: ಸಾವಿತ್ರಿ ಪೂರ್ಣ ಚಂದ್ರ

Exit mobile version