Site icon newsroomkannada.com

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ ನಿಧನ

ಹಳೆಯಂಗಡಿ: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಯವರ ತಂದೆ ಅಂಗಡಿಮಾರ್ ಕೃಷ್ಣ ಭಟ್ ಹಳೆಯಂಗಡಿ ಸಮೀಪದ ಪಕ್ಷಿಕೆರೆಯಲ್ಲಿರುವ ಸ್ವಗೃಹದಲ್ಲಿ ನಿನ್ನೆ ರಾತ್ರಿ ನಿಧನ ಹೊಂದಿದರು. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಪುತ್ರ ವಿಶ್ವೇಶ್ವರ ಭಟ್ ಜೊತೆ ವಾಸವಿದ್ದ ಅವರು ಸಾಂಪ್ರದಾಯಿಕ ಕೃಷಿಕರೂ, ವೈದಿಕ ವಿದ್ವಾಂಸರೂ ಆಗಿದ್ದ ದಿವಂಗತರು ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ ಅನೇಕ ಕನ್ನಡ ಹಾಗೂ ತುಳು ಭಜನೆ, ಪ್ರಾರ್ಥನಾ ಶ್ಲೋಕಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು.

ಐದು ವೇದಗಳನ್ನು ಅಧ್ಯಯನ ಮಾಡಿರುವ ಇವರು ಸಂಹಿತಾ ಯಾಗಗಳು, ಮತ್ತಿನ್ನಿತರ ಯಾಗಗಳನ್ನು ಮಾಡಿರುವ ಸಾಧಕರೆನಿಸಿದ್ದರು. ದಶಕಗಳ ಹಿಂದೆ ಪತ್ನಿ ಯಮುನಾ ಭಟ್ ಅವರನ್ನು ಕಳೆದುಕೊಂಡಿದ್ದ ಇವರು ತನ್ನ ಎಂಟನೇ ಪುತ್ರ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ರ ಸಹಿತ ಐದು ಮಂದಿ ಪುತ್ರರು ಹಾಗೂ ಏಳು ಮಂದಿ ಪುತ್ರಿಯರನ್ನು ಅಲ್ಲದೇ ಅಪಾರ ಅಭಿಮಾನಿಗಳನ್ನು ಅಗಲಿರುವರು. ಇವರು ಗೈದಿರುವ ಜೀವಮಾನ ಸಾಧನೆಗಾಗಿ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ ಸಹಿತ ಅನೇಕಾನೇಕ ಗೌರವಾಭಿನಂದನೆಳು ಪ್ರಾಪ್ತವಾಗಿವೆ. ಇಂದು ಮಧ್ಯಾಹ್ನ 12 ಕ್ಕೆ ಪಕ್ಷಿಕೆರೆಯ ಸ್ವಗೃಹದಲ್ಲಿ ಅಂತ್ಯಕ್ರಿಯೆ ಜರಗಲಿದೆ.

Exit mobile version