ಉಮೇಶ ಎಚ್.ಎಸ್
ಮಂಗಳೂರು: ಬದುಕು ಎಂಬುದು ಅಚ್ಚರಿಗಳ ಪಯಣ ಎಂಬ ಮಾತಿದೆ. ಇಂದು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುವವನು ನಾಳೆ ಬೀದಿಯಲ್ಲಿ ಅಲೆದಾಡುವ ಭಿಕ್ಷುಕನಾಗಬಹುದು. ನನ್ನನ್ನು ಯಾವ ಕಾಯಿಲೆಯೂ ಕಾಡುವುದಿಲ್ಲ ಗರ್ವದಿಂದ ಎದೆಯುಬ್ಬಿಸಿ ಹೇಳುವವನು ನಾಳೆ ಅಚಾನಕ್ ಆಗಿ ಅನಾರೋಗ್ಯಕ್ಕೆ ತುತ್ತಾಗಬಹುದು. ಅದೆಲ್ಲವೂ ದೇವರ ಇಚ಼್ಛೆ ಎಂಬುದು ನಿತ್ಯ ಸತ್ಯ. ಅದಕ್ಕೆ ಸುಖ ಬಂದಾಗ ಅಹಂಪಡಬೇಡ, ದುಃಖವುಂಟಾದಾಗ ದೃತಿಗೆಡಬೇಡ ಎಂಬ ಶರಣರ ಮಾತುಗಳು ಯಾವುದೇ ಕಾಲಕ್ಕೂ ಅನ್ವಯವಾಗುವ ಸತ್ಯವಾಕ್ಯ. ಅದೇ ರೀತಿ ಬದುಕಿನಲ್ಲಿ ಎದುರಾದ ದಿಢೀರ್ ದುರ್ವಿಧಿಯನ್ನು ಮೆಟ್ಟಿನಿಂತು ನಾಲ್ಕು ಜನರಿಗೆ ಮಾದರಿಯಾಗುವ ಜೀವನ ನಡೆಸುತ್ತಿರುವ ಮಂಗಳೂರು ಬೋಂದೆಲ್ ಸರ್ಕಲ್‌ನಿಂದ ಮಂಜಲ್ಪಾದೆಗೆ ಸಾಗುವ ರಸ್ತೆಯಲ್ಲಿರುವ ಹನುಮಾನ್ ಗ್ಯಾರೇಜ್ ಮಾಲೀಕ ಲಕ್ಷ್ಮಿಕಾಂತ್ ಅವರ ಬದುಕಿನ ಯಶೋಗಾಥೆ ನಿಮ್ಮ ಮುಂದಿದೆ.
ಲಕ್ಷ್ಮಿಕಾಂತ್ ಅವರು ಈ ಮೊದಲು ಶೋರೂಂ ಒಂದರಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡ್ತಾ ಇದ್ದರು. ಆದರೆ ಲಕ್ಷ್ಮಿಕಾಂತ್ ಅವರಿಗೆ 2015ರಲ್ಲಿ ತಲೆಯೊಳಗೆ ಏನೋ ಒಂದು ಭಯಂಕರ ಸದ್ದು ಆದ ಹಾಗೆ ಆಯಿತು. ನಂತರ ಕಣ್ಣು ಮಂಜಾಯಿತು. ಎದುರಿಗೆ ಏನಿದೆ ಎಂದು ಕಾಣದಾಯಿತು. ತಕ್ಷಣ ಆಸ್ಪತ್ರೆಗೆ ತೆರಳಿ ವಿವಿಧ ಪರೀಕ್ಷೆ, ಚಿಕಿತ್ಸೆ ನಡೆಸಿದ್ರೂ ಕೂಡ ಏನು ಫಲ ಸಿಗಲಿಲ್ಲ. ಡಾಕ್ಟರ್ ಗಳು ಹೇಳಿದ್ದು, ಒಂದೇ ಮಾತು. ಇನ್ಮುಂದೆ ಕಣ್ಣು ಮೊದಲಿನಂತಾಗುವುದು ಸಾಧ್ಯವಿಲ್ಲ ಎಂದು. ದಾರಿಕಾಣದೆ ಮನೆಗೆ ವಾಪಸ್ ಬಂದಿದ್ದಾಯಿತು. ಕೆನ್ನೆ ಸೇರಿದಂತೆ ದೇಹದ ಒಂದು ಭಾಗದಲ್ಲಿ ಸ್ಪರ್ಶ ಜ್ಞಾನವೇ ಇಲ್ಲದ ಸ್ಥಿತಿ ಉಂಟಾಯಿತು. ಸೋತವನಿಗೆ ಒಂದು ಪೆಟ್ಟು ಜಾಸ್ತಿ ಎಂಬಂತೆ ಅವರಿವರ ಕುಹಕದ ಮಾತುಗಳನ್ನು ಕೇಳಿದ್ದಾಯಿತು. ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ಬಂದು ತಲುಪಿದ್ದಾಯಿತು. ಈ ವೇಳೆ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿಯೇ ಆಸರೆ ಎಂಬತೆ ನಿನ್ನ ಕಷ್ಟ ನನ್ನದೇ ಎಂಬಂತೆ ಸಹಾಯಕ್ಕೆ ಮುಂದಾಗಿದ್ದು ಇವರೊಂದಿಗೆ ಈ ಮೊದಲು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಜಯಂತ್ ಎಂಬ ಸ್ನೇಹಿತ. ಮನೆಯಲ್ಲಿಯೇ ಕುಳಿತು ಮನಸ್ಸು ಕೆಡಿಸಿಕೊಳ್ಳಬೇಡ ನಾವೇ ಒಂದು ಗ್ಯಾರೇಜ್ ಹಾಕೋಣ ಎಂಬ ಐಡಿಯಾ ಮುಂದಿಟ್ಟರು. ಮುಂದೆ ಹಿಂದೆ ತಿರುಗಲಿಲ್ಲ ಸ್ವಂತದೊಂದು ಗ್ಯಾರೇಜ್ ಅನ್ನು ಆರಂಭಿಸಿಯೇ ಬಿಟ್ಟರು. ಇದೀಗ ಲಕ್ಷ್ಮಿಕಾಂತ್ ಅವರ ಗ್ಯಾರೇಜ್ ಒಂಭತ್ತು ಜನರಿಗೆ ಅನ್ನ ನೀಡುವ ಲಕ್ಷ್ಮಿದೇವಿಯ ಆಲಯವಾಗಿ ಬದಲಾಗಿದೆ. ಶಿವಮೊಗ್ಗ ಸೇರಿದಂತೆ ವಿವಿಧ ಊರುಗಳಿಂದ ಈ ಗ್ಯಾರೇಜ್ ನ ಲಕ್ಷ್ಮಿನಾರಾಯಣ ಅವರನ್ನೇ ಹುಡುಕಿಕೊಂಡು ಬರುವ ನೂರಾರು ಕಸ್ಟಮರ್‌ಗಳು ಇವರಿಗಿದ್ದಾರೆ. ಕೇವಲ ಕಾರು ರಿಪೇರಿ ಮಾತ್ರವಲ್ಲ. ಅವರು ಹೇಗೆ ಕೆಲಸ ಮಾಡ್ತಾರೆ ಅನ್ನುವುದನ್ನು ಕಾಣಲು ಬರುವ ಹಲವರಿದ್ದಾರೆ. ಕಣ್ಣು ಕಾಣಿಸದಿದ್ದರೂ ಕಾರಿನ ಪ್ರತಿ ಪಾರ್ಟ್ ಗಳನ್ನು ಮುಟ್ಟಿ ನೋಡಿಯೇ ಇದಕ್ಕೆ ಇಂತಹ ಪ್ರಾಬ್ಲೆಂ ಇದೆ ಹೀಗೆ ಸರಿ ಮಾಡಬೇಕು ಎಂದು ಥಟ್ಟನೇ ಸೂಚಿಸುವ ಪರಿ ಅಚ್ಚರಿ ಮೂಡಿಸುತ್ತದೆ.
ಜಸ್ಟ್ ಒನ್ ಟಚ್ ನಲ್ಲಿ ಹೇಳ್ತಾರೆ ಪ್ರಾಬ್ಲೆಂ: ಲಕ್ಷ್ಮಿಕಾಂತ್ ಅವರಿಗೆ ದೃಷ್ಟಿ ದೋಷ ಇರುವ ಕಾರಣ ಮುಂದಿರುವ ವಸ್ತುಗಳು ಕಾಣದು. ಆದರೆ ಕಾರುಗಳ ರಿಪೇರಿ ಗ್ಯಾರೇಜ್ ಹೊಂದಿರುವ ಅವರು ತಮ್ಮ ಗ್ಯಾರೇಜ್ ಗೆ ಬರುವ ಎಲ್ಲಾ ಕಾರುಗಳು ಸೇರಿದಂತೆ ವಾಹನಗಳ ಸಮಸ್ಯೆಗಳನ್ನು ಒಂದೇ ಟಚ್ ನಲ್ಲಿ ಇಂತಹುದೇ ಪ್ರಾಬ್ಲೆಂ ಆಗಿದೆ ಅಂತ ಹೇಳಬಲ್ಲರು. ಈ ಕಾರಿಗೆ ಈಗ ಆಯಿಲ್ ಚೇಂಜ್ ಮಾಡುವ ಟೈಮ್ ಆಗಿದೆ. ಟೈರ್ ಸ್ವಲ್ಪ ದಿನ ಓಡಿಸಬಹುದು ಎಂದು ನಿಖರವಾಗಿ ಹೇಳುವುದನ್ನು ನೋಡಿದ್ರೆ ಆಶ್ಚರ್ಯ ಆಗದೇ ಇರದು. ಏನೋ ಒಂದು ಘಳಿಗೆಯಲ್ಲಿ ಕಣ್ಣಿನ ಶಕ್ತಿ ಹೋಯಿತು. ಆದರೆ ನಾನು ಪ್ರತಿನಿತ್ಯ ನೆನೆಯುವ ಶ್ರೀರಾಮ ಕೈಗೆ ಕಣ್ಣಿಗಿಂತ ಒಂದಷ್ಟು ಹೆಚ್ಚಿನ ಶಕ್ತಿ ನೀಡಿದ್ದಾನೆ ನೋಡಿ ಎಂದು ನಗುತ್ತಾರೆ ಲಕ್ಷ್ಮಿಕಾಂತ್.
ಲಕ್ಷ್ಮಿಕಾಂತ್ ಅವರ ಗ್ಯಾರೇಜ್ ನಲ್ಲಿ ಪ್ರಸ್ತುತ ಒಂಭತ್ತು ಮಂದಿ ಕೆಲಸದವರಿದ್ದಾರೆ. ಮುಂದೆ ಗ್ಯಾರೇಜ್ ವಿಸ್ತರಿಸುವ ಪ್ಲ್ಯಾನ್ ಇದೆಯೇ ಎಂದು ಕೇಳಿದರೆ ಎಲ್ಲವೂ ದೇವರ ಇಚ್ಛೆ. ಸರ್ವಶಕ್ತನ ಶ್ರೀರಕ್ಷೆ, ಆಶೀರ್ವಾದವಿದ್ದರೆ ಏನು ಬೇಕಿದ್ದರೂ ಸಾಧಿಸಬಹುದು ಎನ್ನುತ್ತಾರೆ ಅವರು.
ಜಾಗ ನೀಡಿದ ರಫೀಕ್ ಬೋಂದೆಲ್: ಮನೆ ಮಂದಿ ಸ್ನೇಹಿತರು ಸೇರಿದಂತೆ ಹಲವರು ಸ್ವಂತದೊಂದ್ದು ಗ್ಯಾರೇಜ್ ಮಾಡುವಂತೆ ಸಲಹೆ ನೀಡಿದರು. ಆದರೆ ಗ್ಯಾರೇಜ್ ಗೆ ಜಾಗ ಎಲ್ಲಿದೆ ಎಂಬ ಪ್ರಶ್ನೆ ಎದುರಾಯಿತು. ಆ ವೇಳೆ ಅವರ ಸ್ನೇಹಿತರ ವಲಯದವರೇ ಆದ ರಫೀಕ್ ನನ್ನ ಜಾಗ ನೀಡುತ್ತೇನೆ ಎಂದು ಮುಂದೆ ಬಂದರು. ಅಲ್ಲದೆ ಉತ್ತಮವಾದ ಸ್ಥಳವನ್ನು ಬಾಡಿಗೆ ಆಧಾರದಲ್ಲಿ ಒದಗಿಸಿ ಒಂಭತ್ತು ಮಂದಿ ಕೆಲಸ ಮಾಡುವ ದುಡಿಮೆಯ ತಾಣದ ಮೊದಲ ಹೆಜ್ಜೆಗೆ ಮುನ್ನುಡಿ ಬರೆದರು.
ವಾಸ್ತು ತಜ್ಞ ಮುನಿಯಂಗಳ ಸಹಕಾರ ಮರೆಯುವುದು ಹೇಗೆ: ಪ್ರಸಿದ್ಧ ವಾಸ್ತು ತಜ್ಞ ಮಹೇಶ್ ಮುನಿಯಂಗಳ ಅವರು ತಮ್ಮ ಕಾರನ್ನು ಸರ್ವಿಸ್ ಗಾಗಿ ಗ್ಯಾರೇಜ್ ಒಂದರಲ್ಲಿ ಯಾವಾಗಲೂ ಇರಿಸುತ್ತಿದ್ದರು. ಅಲ್ಲಿ ಯಾವಾಗಲೂ ಲಕ್ಷ್ಮಿಕಾಂತ್ ಅವರೇ ಇವರ ಕಾರನ್ನು ಪರೀಕ್ಷೆ ಮಾಡಿ ಫೈನಲ್ ಮಾಡುತ್ತಿದ್ದರು. ಆದರೆ ಲಕ್ಷ್ಮಿಕಾಂತ್ ಅಲ್ಲಿ ಕೆಲಸ ಬಿಟ್ಟು ಮತ್ತೊಂದೆಡೆ ಕೆಲಸಕ್ಕೆ ಸೇರಿದ್ದರು. ಕಾರು ರಿಪೇರಿಯ ಕಾರಣಕ್ಕೆ ಲಕ್ಷ್ಮಿಕಾಂತ್ ಅವರನ್ನು ಹುಡುಕಿಕೊಂಡು ಬಂದ ಮುನಿಯಂಗಳ, ಲಕ್ಷ್ಮಿ ಅವರ ಬದುಕಿನಲ್ಲಿ ಎದುರಾದ ಅಚಾನಕ್ ಘಟನೆಯನ್ನು ತಿಳಿದುಕೊಂಡರು. ಅಲ್ಲದೆ ಹೊಸದಾಗಿ ಗ್ಯಾರೇಜ್ ಒಂದನ್ನು ಆರಂಭಿಸುವಂತೆ ಸೂಚಿಸಿ ಅದಕ್ಕೆ ಅಗತ್ಯವಾದ ಧಾರ್ಮಿಕ ವಿಚಾರಗಳನ್ನು ತಿಳಿಸಿದರು. ಈ ಮೂಲಕ ನಾನು ಮತ್ತೊಮ್ಮೆ ಬದುಕಿನಲ್ಲಿ ಭರವಸೆ ಕಂಡುಕೊಳ್ಳುವಂತಾಯಿತು ಎಂದು ಮುನಿಯಂಗಳ ಅವರ ಸಹಕಾರವನ್ನು ನೆನೆಯುತ್ತಾರೆ ಲಕ್ಷ್ಮಿಕಾಂತ್.
Video link
https://youtu.be/dDJMdksweio