main logo

ಪ್ರಕೃತಿಯೊಂದಿಗೆ ಬೆರೆತ ತುಳುನಾಡಿನ ನಾಗಾರಾಧನೆ – ಒಂದು ವಿಶ್ಲೇಷಣೆ

ಪ್ರಕೃತಿಯೊಂದಿಗೆ ಬೆರೆತ ತುಳುನಾಡಿನ ನಾಗಾರಾಧನೆ – ಒಂದು ವಿಶ್ಲೇಷಣೆ

ನಾಗರ ಪಂಚಮಿ ಹಬ್ಬ ಮತ್ತೆ ಬಂದಿದೆ. ಮೊದಲೆಲ್ಲಾ ನಾಗರ ಪಂಚಮಿ ಎಂದರೆ ಮಳೆಯೋ ಮಳೆ. ಆ ಮಳೆಯಲ್ಲಿ ನಾಗ ಬನಗಳಿಗೆ ತೆರಳಿ ಮಳೆಯಲ್ಲಿ ನೆನೆಯುತ್ತಾ ನಾಗರ ಕಲ್ಲುಗಳಿಗೆ ತನು ಎರೆಯುವ ದೃಶ್ಯ ಕರಾವಳಿಯಾದ್ಯಂತ ಕಂಡು ಬರುತ್ತಿತ್ತು.

ಆದರೆ ಬದಲಾದ ಕಾಲ ಘಟ್ಟದಲ್ಲಿ ನಾಗ ಬನಗಳು ಸುಧಾರಿತ ರೂಪವನ್ನು ಪಡೆದುಕೊಂಡು ವ್ಯವಸ್ಥಿತ ಸ್ವರೂಪದಲ್ಲಿ ಮರುನಿರ್ಮಾಣಗೊಂಡಿವೆ. ಮತ್ತು ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಭಾಗದಲ್ಲಿ ಮಳೆಯಬ್ಬರವೂ ಇಳಿಮಿಖವಾಗುತ್ತಿದೆ. ಈ ವರ್ಷವಂತೂ ಮಳೆರಾಯ ಅಪರೂಪದ ಅತಿಥಿಯಾಗಿದ್ದಾನೆ.

ಹಾಗೆಂದು ನಾಗರ ಪಂಚಮಿ ಆಚರಣೆಯೇನೂ ಕಳೆಗುಂದಿಲ್ಲ. ಇಂದಿಗೂ ನಾಗರ ಪಂಚಮಿಯ ದಿನ ನಾಗ ಕ್ಷೇತ್ರಗಳಲ್ಲಿ ಹಾಗೂ ತಮ್ಮ ತಮ್ಮ ಕುಟುಂಬದ ನಾಗ ಬನಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಹಬ್ಬಗಳ ಸರಣಿಯ ಪ್ರಥಮ ಹಬ್ಬವವನ್ನು ಭಕ್ತಿ-ಭಾವದಿಂದಲೇ ಆಚರಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಕರಾವಳಿಯ ನಾಗಾರಾಧನೆ ಮೇಲೊಂದು ಬೆಳಕು ಚೆಲ್ಲುವ ಲೇಖನ ಇಲ್ಲಿದೆ.

ತುಳುನಾಡಿನಲ್ಲಿ ನಾಗಪೂಜೆಗೆ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ಆರಾಧನಾ ಕೇಂದ್ರಗಳಿವೆ. ನಾಗಬನ, ನಾಗನ ಕಟ್ಟೆ, ನಾಗನ ಕಲ್ಲು, ನಾಗನ ಹುತ್ತ, ನಾಗ ದೇವಾಲಯ ಮತ್ತು ಆಲಡೆಗಳಲ್ಲಿ ನಾಗಪೂಜೆಯ ಮೂಲಕ ನಾಗನನ್ನು ಸಂತೃಪ್ತಿಪಡಿಸುವ ವಿಧಿ-ವಿಧಾನಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ.

ನಾಗಬನಗಳಲ್ಲಿ ಮುಖ್ಯವಾಗಿ ತನು ತರ್ಪಣ, ನಾಗ ತಂಬಿಲ, ಆಶ್ಲೇಷಾ ಬಲಿ ಇತ್ಯಾದಿ ಸೇವೆಗಳು ಜರುಗುತ್ತವೆ. ಪ್ರಸ್ತುತ ತುಳುನಾಡಿನ ಬಹುತೇಕ ನಾಗಬನಗಳಲ್ಲಿ ಬ್ರಾಹ್ಮಣ ವೈದಿಕರು, ಪುರೋಹಿತರ ನೇತೃತ್ವದಲ್ಲಿ ಈ ಆಚರಣೆಗಳು ನಡೆಯುತ್ತವೆ.

ಕುಕ್ಕೆ ಸುಬ್ರಹ್ಮಣ್ಯ, ಕಾಳಾವರ, ಮಂಜೇಶ್ವರ, ಬಳ್ಳಮಂಜ, ಕುಡುಪು, ಪಡುಬಿದ್ರಿ, ಕಾಟುಕುಕ್ಕೆ, ಮುಗು, ಕುಮಾರಮಂಗಲ, ಕೋಟೆಕಾರು, ಪಾವಂಜೆ, ಕಜೆಕಾರು, ಸೂಡ ಇತ್ಯಾದಿ ಪ್ರಸಿದ್ಧ ನಾಗ ಕ್ಷೇತ್ರಗಳು ಅವಿಭಜಿತ ಕರಾವಳಿ ಜಿಲ್ಲೆಗಳಲ್ಲಿದೆ. ಸಂತಾನಹೀನತೆ, ಚರ್ಮರೋಗ ಮತ್ತು ಇನ್ನಿತರೆ ಖಾಯಿಲೆಗಳನ್ನು ನಾಗ ದೇವರು ಗುಣಪಡಿಸುತ್ತಾರೆಂಬ ನಂಬಿಕೆ ಭಕ್ತಾದಿಗಳದ್ದು.

ತುಳುನಾಡಿನ ನಾಗಾರಾಧನಾ ರೂಪಗಳನ್ನು ಮೂರು ರೀತಿಗಳಲ್ಲಿ ವರ್ಗೀಕರಿಸಬಹುದು. ನಾಗನನ್ನು ಮಾತ್ರ ಆರಾಧಿಸುವ ರೂಪ ಒಂದು ರೀತಿಯದ್ದಾದರೆ; ಎರಡನೆಯದು, ನಾಗನ ಜೊತೆ ಜೊತೆಗೆ ದೈವಗಳನ್ನು ಪೂಜಿಸುವುದು ಮತ್ತು ಮೂರನೆಯದು; ಶುದ್ಧ ವೈದಿಕ ರೀತಿಯಲ್ಲಿ ವೈದಿಕರ ಮೂಲಕ ನಾಗನನ್ನು ಪೂಜಿಸುವುದು.

ತುಳುನಾಡು ಸಮೃದ್ಧವಾದ ಬೆಟ್ಟ-ಗುಡ್ಡಗಳಿಂದಾವೃತವಾದ ಭೂಭಾಗ. ದಟ್ಟಾರಣ್ಯಗಳಿಂದ ಕೂಡಿದ ಈ ಪ್ರದೇಶ ಉರಗ ಸಂತತಿಗೆ ಸಹಜವಾಗಿಯೇ ಹೆಚ್ಚಾಗಿತ್ತು. ಇದು ಆ ಕಾಲದಲ್ಲಿ ಇಲ್ಲಿನ ಮೂಲನಿವಾಸಿಗಳಿಗೆ ಒಂದು ಆತಂಕಕಾರಿ ವಿಷಯವಾಗಿದ್ದು ಬಳಿಕ ಇದಕ್ಕೆ ಆರಾಧನೆಯ ಸ್ವರೂಪವನ್ನು ಕೊಟ್ಟರು ಎಂಬುದು ಸಂಶೋಧನೆಗಳಿಂದ ತಿಳಿದುಬಂದಿರುವ ವಿಚಾರ.

ಈ ರೀತಿಯ ಆರಾಧನಾ ಕೇಂದ್ರಗಳಾಗಿ ರೂಪುಗೊಂಡ ಮೊದಲ ಹಂತವೇ ನಾಗಬನಗಳು. ಕಾಡಿನ ಮಧ್ಯೆ ಹುಟ್ಟಿ ಬೆಳೆದು ವಿಕಾಸ ಹೊಂದಿದ ಮಾನವನಿಗೆ ಸಹಜವಾಗಿಯೇ ಕಾಡಿನ ಬಗೆಗೆ ಒಂದು ರೀತಿ ಭಯ-ಭಕ್ತಿ, ಅಗತ್ಯತೆಗಳ ಅರಿವಿತ್ತು. ಕಾಡಿನ ಇತರೆ ಪ್ರಾಣಿಗಳನ್ನು – ಸಂತತಿಗಳನ್ನು ಒಲಿಸಿಕೊಂಡು ತನ್ನ ಜೀವನ ಸಾಂಗವಾಗಿ ಸಾಗಿಸುವ ನಿಟ್ಟಿನಲ್ಲಿ ಆರಾಧನಾ ಸಂಪ್ರದಾಯಗಳನ್ನು ಪ್ರಾರಂಭಿಸಿರಬೇಕು. ಈ ಆರಾಧನಾ ಶ್ರೇಣಿಯಲ್ಲಿ ಪ್ರಥಮವಾಗಿ ಕಾಣುವಂಥದ್ದು ನಾಗಬನಗಳು.

ಆದುದರಿದಂಲೇ, ತಂಪಾಗಿರುವ ಹುತ್ತ, ಮರದ ಬೇರುಗಳು, ನೆರಳಿರುವ ಜಾಗವನ್ನು ಆಶ್ರಯಿಸುವ ಸರ್ಪ ಜೀವನ ಕ್ರಮಕ್ಕೆ ಪೂರಕವಾದ ನಾಗ ಸಂಕಲ್ಪಗಳ ಮೂಲಕ ‘ನಾಗಬನ’ಗಳು ಮೂರ್ತ ಸ್ವರೂಪವಾಗಿ ಕಾಣಿಸಿಕೊಂಡವು.

‘ನಾಗಬನ’ಗಳ ಇನ್ನೊಂದು ಪರ್ಯಾಯ ಹೆಸರು ‘ದೇವರ ಕಾಡು’ಗಳು. ತುಳುನಾಡಿನ ಮೂಲನಿವಾಸಿಗಳ ಸಂಪ್ರದಾಯವೇ ನಾಗಬನಗಳ ಹುಟ್ಟಿಗೆ ಕಾರಣವಾಗಿರುವುದನ್ನು ಈ ಮೊದಲೇ ಸ್ಪಷ್ಟಪಡಿಸಲಾಗಿದೆ. ಆದರೆ ಕಾಲಾಂತರದಲ್ಲಿ, ಪರಿವರ್ತನೆಯ ಹಾದಿಯಲ್ಲಿ ನಾಗಬನಗಳು ನಾಗಬನಗಳಾಗಿ ಉಳಿದಿಲ್ಲ ಎಂಬುದು ಗಮನಾರ್ಹ.

ತನು ಹಾಕುವುದು (ನೀರು, ಸೀಯಾಳ, ಹಾಲು) ಅತ್ಯಂತ ಸಂದರ್ಭೋಚಿತವಾಗಿ ಕಂಡುಬರುತ್ತದೆ. ತನು ಹಾಕುವ ಮೂಲಕ, ತಂಬಿಲ ನೀಡುವ ಮೂಲಕ ಆ ಪ್ರದೇಶವನ್ನು ತಂಪಾಗಿಸುವುದು. ಇದರಿಂದ ಅ ಪ್ರದೇಶದಲ್ಲಿರುವ ನಾಗಗಳೂ ತಂಪಾದ ವಾತಾವರಣವನ್ನು ಅರಸಿ ಬೇರೆಡೆಗೆ ಹೋಗುವುದಿಲ್ಲ.

ಹೀಗೆ, ತಲೆತಲಾಂತರಗಳಿಂದ ತುಳುನಾಡಿನ ಮಣ್ಣಿನಲ್ಲಿ ನಾಗಾರಾಧನೆ ತನ್ನದೇ ಆದ ವಿಶೇಷತೆ ಮತ್ತು ಧಾರ್ಮಿಕ ಪ್ರಜ್ಞೆಯೊಂದಿಗೆ ಆಚರಿಸಿಕೊಂಡು ಬರುತ್ತಿರುವ ಒಂದು ಆಚರಣೆಯಾಗಿದೆ.

ಇದರ ಆಚರಣೆ ಸ್ವರೂಪದ ಬಗ್ಗೆ ಹಲವಾರು ರೀತಿಯ ವಾದಗಳಿದ್ದರೂ, ತುಳುನಾಡಿನ ಮೂಲ ಕಸುಬಾಗಿದ್ದ ಬೇಸಾಯ ಮತ್ತು ಕೃಷಿಗೆ ಪೂರಕವಾಗಿ ಈ ನಾಗಾರಾಧನೆ ನಮ್ಮ ಹಿರಿಯರಿಂದ ನಡೆಯುತ್ತಾ ಬಂದಿದೆ.

ಈ ಆಧುನಿಕ ಕಾಲ ಘಟ್ಟದಲ್ಲೂ ನಾಗಾರಾಧನೆಯ ಮಹತ್ವವನ್ನು ಅರಿತುಕೊಂಡು ನಾಗಾರಾಧನೆಯೊಂದಿಗೆ ಪೃಕೃತಿ ಆರಾಧನೆಯನ್ನೂ ಮುಂದುವರೆಸಿಕೊಂಡು ಹೋಗುವ ಬಹುದೊಡ್ಡ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಷಯಗಳು.

ಮಾಹಿತಿ ಮೂಲ: ನಾಗಾರಾಧನೆ (ಪರಂಪರೆ – ಸ್ಥಿತ್ಯಂತರಗಳು) – ಪುಸ್ತಕ

 

Related Articles

Leave a Reply

Your email address will not be published. Required fields are marked *

error: Content is protected !!