ಬಂಟ್ವಾಳ: ಸಜೀಪಮೂಡ ಬೇಂಕ್ಯ ಸರಕಾರಿ ಹಿ.ಪ್ರಾ ಶಾಲೆಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಇಂದು (ಸೆ.11) ಭೇಟಿ ನೀಡಿ, ಶತಮಾನೋತ್ಸವ ಸಂಭ್ರಮದಲ್ಲಿರುವ ಸರಕಾರಿ ಶಾಲೆಗೆ ತಮ್ಮ ಶುಭಾಶಯಗಳನ್ನು ನೀಡಿದರು.
ಈ ಭೇಟಿಯ ಸಂದರ್ಭದಲ್ಲಿ, ಸ್ಪೀಕರ್ ಖಾದರ್, ಶಾಲಾ ಕಟ್ಟಡ,ಮತ್ತು ತರಗತಿ ಕೊಠಡಿಗಳನ್ನು ಪರಿಶೀಲಿಸಿದರು.
ಶಾಲೆಗೆ ನೂತನ ಕಟ್ಟಡ ಹಾಗೂ ಅಭಿವೃದ್ಧಿ ಕೆಲಸಗಳು ಮತ್ತು ಶಾಲೆಯ ಆವರಣಕ್ಕೆ ಇಂಟರ್ ಲಾಕ್ ಹಾಕುವ ಕುರಿತಾಗಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಜೊತೆ ಸೇರಿ ಸ್ಪೀಕರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಯುಟಿ ಖಾದರ್, ‘ಈ ಶಾಲೆಯ ಅಭಿವೃದ್ಧಿ ಕುರಿತಾಗಿ ನಾವು ಜೊತೆಯಾಗಿ ಚರ್ಚೆ ಮಾಡಿದ್ದೇವೆ. ಕೆಲವೊಂದು ಮೂಲಭೂತ ಸೌಕರ್ಯಗಳ ಅಗತ್ಯತೆ ಇದೆ, ಹೀಗಾಗಿ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಹಕಾರ ಕೊಡ್ತೇವೆ. ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡ್ತೇವೆ..’ ಎಂದು ಭರವಸೆಯನ್ನು ನೀಡಿದರು.
ಇನ್ನು, ಶತಮಾನೋತ್ಸವದ ಪ್ರಯುಕ್ತ ಶಾಲೆಯಲ್ಲಿ ಪ್ರತೀ ಆದಿತ್ಯವಾರ ಹಿರಿಯ ವಿದ್ಯಾರ್ಥಿಗಳಿಂದ ಮತ್ತು ಶಾಲೆಯ ಶಿಕ್ಷಕರು ಜೊತೆ ಸೇರಿ ಶ್ರಮದಾನವನ್ನು ಮಾಡುತ್ತಿದ್ದು. ಶತಮಾನೋತ್ಸವ ಸಂಭ್ರಮಾಚರಣೆ ವಿಜೃಂಭಣೆಯಿಂದ ನಡೆಸಬೇಕೆಂದು ಯೋಜನೆಯನ್ನು ಕೂಡ ಹಾಕಿಕೊಳ್ಳಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ.
ಈ ಸಂದರ್ಭ ಸಜೀಪ ಮೂಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಿದ್ಧೀಕ್, ಮಾಜಿ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ್ ಪೂಂಜಾ, ಪಂಚಾಯತ್ ಸದಸ್ಯರಾದ ಯೋಗಿಶ್, ಕುರ್ನಾಡು ಪಂಚಾಯತ್ ಮಾಜಿ ಅಧ್ಯಕ್ಷರಾದ ಝುಬೇರ್, ಶಾಲಾ ಮುಖ್ಯ ಶಿಕ್ಷಕಿ ವತ್ಸಲ, ಶಾಲಾ ಶಿಕ್ಷಕಿಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.