Site icon newsroomkannada.com

ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಸ್ಥಾನಮಾನ: ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಶೋಕ್ ರೈ

ಬೆಂಗಳೂರು:  ತುಳು ಭಾಷೆಯನ್ನು ಎರಡನೇ ಅಧಿಕೃತ ರಾಜ್ಯಭಾಷೆಯಾಗಿಸಬೇಕು ಎಂಬುದು ತುಳುವರ ದಶಕಗಳ ಕೂಗು. ಈ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಲೇ ಇದೆ. ಇದೀಗ  ತುಳು ಭಾಷೆಯನ್ನು ಎರಡನೇ ಅಧಿಕೃತ ರಾಜ್ಯಭಾಷೆಯಾಗಿಸುವ ಬಗ್ಗೆ ಶಿವರಾಜ್‌ ತಂಗಡಗಿ ಭರವಸೆ ನೀಡಿದ್ದು, ವರದಿ ಪಡೆದು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಅಶೋಕ್‌ ರೈ ಮನವಿ: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಅಧಿವೇಶನದಲ್ಲಿ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ರೈ ಮನವಿ ಮಾಡಿದರು. ಇದನ್ನು ತುಳು ಭಾಷೆಯಲ್ಲೇ ಪ್ರಸ್ತಾಪಿಸುತ್ತಲೇ ಸರ್ಕಾರದ ಗಮನ ಸೆಳೆದರು. ಇದಕ್ಕೆ ಸ್ಪೀಕರ್ ಯುಟಿ ಖಾದರ್ ಅವರು ತುಳು ಭಾಷೆಯಲ್ಲೇ ಪ್ರತಿಕ್ರಿಯೆ ನೀಡಿದರು.

ಈ ವೇಳೆ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು, ತುಳುವಿನಲ್ಲೇ ಮಾತಾಡಲು ಮುಂದಾದಾಗ ಕನ್ನಡದಲ್ಲೇ ಮಾತನಾಡಿ ಎಂದು ಸ್ಪೀಕರ್ ಸೂಚಿಸಿದರು. ಬಳಿಕ ಅವರು ಕನ್ನಡ ಮತ್ತು ತುಳುವಿನಲ್ಲಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ, ತುಳು ಭಾಷೆ ಮಾತನಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದರು.

ತುಳುವಿನಲ್ಲಿ ಮಾತನಾಡಿದರೆ ಎಲ್ಲರೂ ಖುಷಿಯಾಗಿ ಇರುತ್ತಾರೆ: ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಖಾದರ್, ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು. ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು ಎರಡನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಿ‌ ಎಂದು ಸ್ಪೀಕರ್ ಸೂಚಿಸಿದರು. ಸ್ಪೀಕರ್ ಸಲಹೆಯನ್ನು ಪರಿಗಣಿಸಿದ ಸಚಿವ ತಂಗಡಗಿ, ವರದಿ ಪಡೆದು ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.

Exit mobile version