ಬೆಳ್ತಂಗಡಿ: ಈ ಮೊದಲು ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಆಧರಿಸಿ ಸಿನಿಮಾವೊಂದು ಹೊರಬರಲಿದೆ ಎಂದು ಸುದ್ದಿಯಾಗಿತ್ತು. ಆದರೆ ಇದೀಗ ಸಿನಿಮಾ ಮಾಡುವುದಕ್ಕೆ ಸೌಜನ್ಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸೌಜನ್ಯಾ ಮಾವ ವಿಠಲ ಗೌಡ, ನಮ್ಮ ಒಪ್ಪಿಗೆ ಇಲ್ಲದೆ ಆ ಸಿನಿಮಾವನ್ನು ಹೇಗೆ ಮಾಡುತ್ತಾರೆ. ನಮ್ಮನ್ನು ದಾರಿ ತಪ್ಪಿಸುವುದಕ್ಕೆ ಸಿನಿಮಾ ಮಾಡಲಾಗುತ್ತದೆಯೇ? ಕಥೆ ಏನು ಮಾಡಿದ್ದಾರೆ ಅನ್ನುವುದೇ ನಮಗೆ ಗೊತ್ತಿಲ್ಲ. ನಮ್ಮ ಉದ್ದೇಶ ಸಿನಿಮಾ ಮಾಡುವುದು ಅಲ್ಲ. ನಮಗೆ ನ್ಯಾಯ ಸಿಗಬೇಕು, ರಾಜ್ಯದ ಕೆಲವು ಮಾಧ್ಯಮಗಳು ಬೇಕೆಂದೇ ಇದನ್ನು ದೊಡ್ಡದಾಗಿ ತೋರಿಸುತ್ತಿವೆ. ಉದ್ದೇಶ ಗೊತ್ತಾಗುತ್ತಿಲ್ಲ, ಯಾರಾದರೂ ಸಿನಿಮಾ ಮಾಡುವುದಕ್ಕೆ ಮುಂದಾದರೆ ಹೈಕೋರ್ಟ್ ನಿಂದ ಅದಕ್ಕೆ ತಡೆಯಾಜ್ಞೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ ಎಂದು ತಿಳಿದು ಬಂದಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.