ಬೆಂಗಳೂರು: ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ (Dharmasthala) ಗ್ರಾಮದ ಮಣ್ಣ ಸಂಕ ಎಂಬಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಎಸ್.ಡಿ.ಎಂ ಕಾಲೇಜು (SDM College) ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ (Sowjanya Case) ಮರುತನಿಖೆ ನಡೆಸಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು (ಸೆ.08) ಹೈಕೋರ್ಟ್ ನಲ್ಲಿ(High Court of Karnataka) ನಡೆಯಲಿದೆ.
ಈ ಅರ್ಜಿಯನ್ನು ಪರಿಗಣಿಸಿ ಈ ಪ್ರಕರಣದ ಮರು ತನಿಖೆ ನಡೆಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಲಿದೆಯೇ ಎಂಬ ವಿಚಾರ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿನ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿ ಪುತ್ರಿ 17 ವರ್ಷದ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐ ತನಿಖೆ ನಡೆಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೆಂದು ಬಂಧಿತನಾಗಿದ್ದ ಕಾರ್ಕಳದ ಸಂತೋಷ್ ರಾವ್ ಅವರನ್ನು ನಿರಪರಾಧಿ ಎಂದು ಘೋಷಿಸಿ ಸಿಬಿಐ ವಿಶೇಷ ನ್ಯಾಯಾಲಯ (CBI Special Court) ಇತ್ತೀಚೆಗೆ ತೀರ್ಪು ನೀಡಿತ್ತು.
ಇದರ ಬೆನ್ನಲ್ಲೇ, ಈ ಪ್ರಕರಣದ ನೈಜ ಆರೋಪಿಗಳ ಪತ್ತೆಗೆ ಆಗ್ರಹಿಸಿ ಮತ್ತು ಅಂದು ತನಿಖೆಯ ಸಂದರ್ಭದಲ್ಲಿ ಲೋಪ ಎಸಗಿರುವ ತನಿಖಾಧಿಕಾರಿ ಮತ್ತು ವೈದ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕರಾವಳಿ ಭಾಗದಲ್ಲಿ ಮಾತ್ರವಲ್ಲದೇ ರಾಜ್ಯದ ಹಲವಾರು ಕಡೆಗಳಲ್ಲಿ ಪ್ರತಿಭಟನೆ ಮತ್ತು ಆಗ್ರಹ ಸಭೆಗಳು ನಡೆಯುತ್ತಿವೆ.
ಈ ನಡುವೆ, ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಗಿರೀಶ್ ಭಾರಾಧ್ವಜ್, ನವೀನ್ ಕುಮಾರ್ ನೆರಿಯ ಬೆಳ್ತಂಗಡಿ ಮತ್ತು ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಬಲ್ನಾಡು, ಪುತ್ತೂರು ಇವರು ಒಟ್ಟಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು (ಸೆ.08) ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.
ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಂ ವಾದಿಸಲಿದ್ದಾರೆ.