ಉಡುಪಿ: ದುಬೈಯಲ್ಲಿ ಉದ್ಯೋಗದಲ್ಲಿದ್ದ ಮಗ ಮೂರು ವರ್ಷಗಳ ಬಳಿಕ ಮನೆಮಂದಿಗೆ ಹೇಳದೇ ಅನಿರೀಕ್ಷಿತವಾಗಿ ಹಿಂತಿರುಗಿದ್ದ, ತಾಯಿ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ದ ಬಗ್ಗೆ ತಿಳಿದು, ಮುಖಕ್ಕೆ ಮಾಸ್ಕ್ ಹಾಕ್ಕೊಂಡು ತಾಯಿ ಬಳಿಯಲ್ಲೇ ಮೀನು ಖರೀದಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದು ಎರಡು ದಿನಗಳ ಹಿಂದೆ ಊರಿನ ಗೆಳೆಯರಿಗಾಗಲೀ, ಮನೆಯವರಿಗಾಗಲೀ ತಿಳಿಸದೆ ಸರ್ಪ್ರೈಸ್ ಕೊಡುವುದಕ್ಕಾಗಿ ನೇರವಾಗಿ ಬಂದಿದ್ದ. ಬೆಳಗ್ಗೆ ಮನೆಗೆ ಬಂದು ತಲುಪಿದಾಗ, ತಾಯಿ ಎಂದಿನಂತೆ ಮೀನು ಮಾರಲು ಹೋಗಿರುವುದು ತಿಳಿದುಬಂದಿತ್ತು. ಬ್ಯಾಗ್ ತೆಗೆದಿಟ್ಟು ನೇರವಾಗಿ ಗಂಗೊಳ್ಳಿ ಮೀನು ಮಾರುಕಟ್ಟೆಗೆ ಬಂದಿದ್ದ ರೋಹಿತ್, ತಾಯಿ ಮೀನು ಮಾರಾಟದಲ್ಲಿ ಬಿಝಿಯಾಗಿರುವುದನ್ನು ನೋಡಿದ್ದ. ದೂರದಿಂದಲೇ ಮುಖಕ್ಕೆ ಟವೆಲನ್ನು ಸುತ್ತಿಕೊಂಡು ಮೀನಿನ ದರ ವಿಚಾರಿಸಲು ತೂಡಗಿದ. ಯುವಕ ಮುಖ ತೋರಿಸದೆ, ಬಂಗುಡೆ ಮೀನಿನ ದರ ಕೇಳುತ್ತಿರುವುದರ ಬಗ್ಗೆ ತಾಯಿ ಸುಮಿತ್ರಾ ವಿಚಾರಣೆ ಮಾಡಿದ್ದಾರೆ.
ಮಾತು ಕೇಳಿದಾಗ ಮಗನ ಧ್ವನಿಯಂತೇ ಕಂಡಿದ್ದರಿಂದ ತಾಯಿಗೆ ಸಂಶಯ ಆಗಿದೆ. ಹೀಗಾಗಿ ಮೀನನ್ನು ಬಿಟ್ಟು ಯುವಕನ ಬಳಿಗೆ ಎದ್ದು ಬಂದಿದ್ದು, ಮಗನ ಮುಖ ನೋಡುತ್ತಲೇ ಅಪ್ಪಿ ಹಿಡಿದು ಕಣ್ಣೀರು ಹಾಕಿದ್ದಾರೆ.