ಕಾಪು: ಕರಾವಳಿಯ ಪ್ರಸಿದ್ಧ ಸಮಾಜ ಸೇವಕ, ಹಿರಿಯ ರಂಗ ಕಲಾವಿದ, ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳು, ಧರಣಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ, ಕಾಪು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಲೀಲಾಧರ ಶೆಟ್ಟಿ (68) ಅವರು ಪತ್ನಿ ವಸುಂಧರಾ ಶೆಟ್ಟಿ (58) ಸಮೇತರಾಗಿ ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲೀಲಾಧರ ಶೆಟ್ಟಿ ಮತ್ತು ವಸುಂಧರಾ ಶೆಟ್ಟಿ ದಂಪತಿ ಮಂಗಳವಾರ ಮಧ್ಯರಾತ್ರಿ 11.20 ರಿಂದ 12.30 ರ ನಡುವಿನ ಅವಧಿಯಲ್ಲಿ ತಮ್ಮ ಮನೆಯ ಪಕ್ಕಾಸಿಗೆ ಒಂದೇ ಸೀರೆಯನ್ನು ಬಿಗಿದು, ಅದರ ಎರಡೂ ತುದಿಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವುದಾಗಿ ತಿಳಿದು ಬಂದಿದೆ.
ಸಾವಿನ ಬಗ್ಗೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿವೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಅವರು ಸಮಾಜದಲ್ಲಿ ನೊಂದವರ ಪಾಲಿಗೆ ಆಶಾಕಿರಣವಾಗಿದ್ದರು. ಸಾವಿರಾರು ಮಂದಿಗೆ ಶಿಕ್ಷಣ, ಉದ್ಯೋಗ, ಸಾಂಸಾರಿಕ ಬಾಂಧವ್ಯ ಜೋಡಣೆಗೆ ನೆರವಾಗಿದ್ದ ಅವರು ಕಾಪು ರಂಗತರಂಗ ನಾಟಕ ತಂಡವನ್ನು ಕಟ್ಟಿ ಕಲೆಯನ್ನು ಪ್ರಸಾರಗೊಳಿಸಲು ಅಪರಿಮಿತವಾಗಿ ಶ್ರಮಿಸಿದ್ದರು. ಸಮಾಜ ಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ, ಸಮಾಜರತ್ನ ಪುರಸ್ಕಾರ ಸಹಿತವಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಭಾಜನರಾಗಿದ್ದರು.