ಚಿತ್ರದುರ್ಗ: ನಗರದ ಪಾಳು ಬಿದ್ದ ಮನೆಯೊಂದರಲ್ಲಿ 5 ಅಸ್ಥಿಪಂಜರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಸತತ 4 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಪಾಳು ಮನೆಯಲ್ಲಿ ಐದು ಅಸ್ಥಿಪಂಜರ ) ಪತ್ತೆಯಾಗಿವೆ ಎಂದು ದೂರು ದಾಖಲಾಗಿದೆ.
ಪವನ್ ಕುಮಾರ್ ಎಂಬವರು ಬಡಾವಣೆ ಠಾಣೆಗೆ ದೂರು ನೀಡಿದ್ದಾರೆ. ಸಂಬಂಧಿ ಜಗನ್ನಾಥ ರೆಡ್ಡಿ ಮತ್ತು ಕುಟುಂಬ ವಾಸವಾಗಿತ್ತು. ಜಗನ್ನಾಥ ರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರ ರೆಡ್ಡಿ ವಾಸವಾಗಿದ್ದರು. ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ. ಅವರ ಮನೆಗೆ ನಾವು ಹೋಗುತ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಜಗನ್ನಾಥ ರೆಡ್ಡಿ ಮನೆಯಲ್ಲಿ ಪತ್ತೆ ಆಗಿರುವುದು ಅವರ ಅಸ್ಥಿಪಂಜರ ಆಗಿರಬಹುದೆಂಬ ಶಂಕೆ ಇದೆ. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು ಎಂದು ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ದೂರು ದಾಖಲಾಗಿದೆ.
ಎಸ್‌ಪಿ ಧರ್ಮೇಂದರ್ ಕುಮಾರ್, ಡಿವೈಎಸ್ಪಿ ಅನಿಲ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ವೈದ್ಯರೊಂದಿಗೆ ಪೊಲೀಸರು ಸಮಾಲೋಚನೆ ನಡೆಸಿದ್ದಾರೆ. ಅಸ್ಥಿಪಂಜರಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಕಾನೂನು ಕ್ರಮಕೈಗೊಂಡಿದ್ದಾರೆ.
ಈ ಬಗ್ಗೆ ಅಲ್ಲಿನ ಸ್ಥಳೀಯರು ಮಾತನಾಡಿದ್ದಾರೆ. ಆ ಮನೆಯಲ್ಲಿ ಕಳೆದ 10 ವರ್ಷಗಳ ಹಿಂದೆ ನಾಲ್ವರು ಮಾತ್ರ ವಾಸವಾಗಿದ್ರು. ಮನೆಯಿಂದ ಯಾರು ಹೊರಬರ್ತಿರಲಿಲ್ಲ. ಈ ಮನೆಯ ಸದಸ್ಯರಿಗೆ ಜನಸಂಪರ್ಕ ಇರಲಿಲ್ಲ. ಬೆಳಗಿನ ಜಾವವೇ ಅವರ ಎಲ್ಲಾ ಕೆಲಸ ಕಾರ್ಯ ಮುಗಿಸ್ತಿದ್ರು ಎಂದು ತಿಳಿಸಿದ್ದಾರೆ.
ಪೊಲೀಸರ ತನಿಖೆ ವೇಳೆ ಈ ಮನೆಯಲ್ಲಿ 2019ರ ಕ್ಯಾಲೆಂಡರ್ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗೆಯೇ ಆ ಮನೆಯ ಸದಸ್ಯರಲ್ಲಿ ಬಾಬುರೆಡ್ಡಿ ಅನ್ನೋರು ಮಾತ್ರ ಜನಸಂಪರ್ಕದಲ್ಲಿದ್ದು, ಉಳಿದವರು ಯಾರು ಸಹ ಹೊರ ಬರುತ್ತಿರಲಿಲ್ಲ. ಹೀಗಾಗಿ ನಗರದಲ್ಲಿ ಭಾರಿ ಆತಂಕ ಮನೆ ಮಾಡಿದ್ದು, ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.