Site icon newsroomkannada.com

ದಾಂಡೇಲಿ ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಜನರ ಸಾವು ; ಬಾಲಕಿಯೊಬ್ಬಳ ರಕ್ಷಿಸಲು ಹೋಗಿ ಪ್ರಾಣತೆತ್ತ ಐವರು

ಹುಬ್ಬಳ್ಳಿ : ಶಿರಸಿ: ದಾಂಡೇಲಿ‌ ನಗರದಿಂದ 12 ಕಿ ಮೀ ದೂರದಲ್ಲಿರುವ ಜೋಯಿಡಾ ತಾಲೂಕಿನ ಅಕೋಡಾ ಗ್ರಾಮದ ಪಕ್ಕದಲ್ಲಿ ಹರಿಯುವ ಕಾಳಿ ನದಿಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿ ಮೂಲದ ಒಂದೇ ಕುಟುಂಬಕ್ಕೆ ಸಂಬಂಧಿಸಿದ ಆರು ಜನ ಸಾವಿಗೀಡಾಗಿದ್ದಾರೆ.

 

ಈ ಘಟನೆ ಭಾನುವಾರ ಸಂಜೆ ನಡೆದಿದೆ. ಈಜಾಡಲೆಂದು ನದಿಗಳಿದಿದ್ದ ಆರು ಜನರ ಪೈಕಿ ಬಾಲಕಿಯೊಬ್ಬಳು ನೀರಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಉಳಿದ ಐವರು ಆಕೆಯನ್ನು ರಕ್ಷಣೆ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

 

ಒಟ್ಟು 8 ಮಂದಿ ಪ್ರವಾಸಕ್ಕೆಂದು ಬಂದವರಲ್ಲಿ 6 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಹುಬ್ಬಳ್ಳಿಯ ಈಶ್ವರ ನಗರದ 40 ವರ್ಷ ವಯಸ್ಸಿನ ನಜೀರ್ ಅಹ್ಮದ್ ಚಮನ್ ಸಾಬ್ ಹೊನ್ನಂಬಲ್ ಹಾಗೂ ಅವರ ಮಕ್ಕಳಾದ 10 ವರ್ಷ ವಯಸ್ಸಿನ ಅಲ್ಪೀಯಾ ಮತ್ತು 6 ವರ್ಷ ವಯಸ್ಸಿನ ಮೊಹಿನ್, ನಜೀರ್ ಅವರ ಸಹೋದರಿ 38 ವರ್ಷ ವಯಸ್ಸಿನ ರೇಷ್ಮಾ ಉನ್ನಿಸಾ ತೌಫೀಕ್ ಅಹ್ಮದ್ ಮತ್ತು ಅವರ ಮಕ್ಕಳಾದ 15 ವರ್ಷ ವಯಸ್ಸಿನ ಇಫ್ರಾ ಮತ್ತು 12 ವರ್ಷ ವಯಸ್ಸಿನ ಅಬಿದ್.

 

ನಗರದ ಜಂಗಲ್ ಲಾಡ್ಜಸ್ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಲ್ಲಿ ಆರು ಜನರ ಶವಗಳನ್ನು ಮೇಲಕ್ಕ ಎತ್ತಲಾಗಿದೆ. ದಾಂಡೇಲಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ. ಸ್ಥಳಕ್ಕೆ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಸಿಪಿಐ ಭಿಮಣ್ಣ ಸೂರಿ, ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

 

ಈಶ್ವರ ನಗರದಲ್ಲಿರುವ ಮೃತರ ಮನೆಯಲ್ಲಿ ನೀರವಮೌನ ಆವರಿಸಿದೆ.‌ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈಶ್ವರ ನಗರಕ್ಕೆ ನಜೀರ್ ಅಹ್ಮದ್ ಕುಟುಂಬ ಆಗಮಿಸಿ ಮನೆಯ ಗೃಹ ಪ್ರವೇಶ ಮಾಡಿತ್ತು. ನಜೀರ್ ಅಹ್ಮದ್ ಮೂಲತಃ ಧಾರವಾಡ ಜಿಲ್ಲೆಯ ಹಳ್ಳಿಕೇರಿ ನಿವಾಸಿಯಾಗಿದ್ದು, ಧಾರವಾಡ ಪಾಲಿಕೆಯಲ್ಲಿ ಗುತ್ತಿಗೆ ಕೆಲಸ ಮಾಡುತ್ತ ಸಾಲ ಶೂಲ ಮಾಡಿ ಮನೆ ಕಟ್ಟಿಸಿದ್ದರು. ಕೇವಲ ಮನೆಯಲ್ಲಿ ನಾಲ್ಕು ತಿಂಗಳ ವಾಸವಾಗಿದ್ದರಷ್ಟೆ.‌ ಆದರೆ ನಿನ್ನೆ ನಡೆದ ದುರಂತದಿಂದ ಇದೀಗ ಮನೆಯೇ ಅನಾಥವಾಗಿದೆ. 6 ಜನ ಸದಸ್ಯರು ಮೃತಪಟ್ಟಿದ್ದು, ಶಾಕ್​ನಿಂದ ಹೊರಬರಲಾರದೇಕುಟುಂಬದಲ್ಲಿ ದು:ಖ ಮಡುಗಟ್ಟಿದೆ‌.

 

ಈಶ್ವರ ನಗರದ ನಿವಾಸದಲ್ಲಿ ಮೃತ ನಜೀರ್ ಅಹ್ಮದ್​​ ಸಹೋದರಿ ಫರೀದಾ ಬೇಗಂ ಮಾತನಾಡಿ, ಪಿಕ್​ನಿಕ್​​ಗೆ​ ಎಂದು ಕುಟುಂಬ ಸಮೇತ ಭಾನುವಾರ ಮುಂಜಾನೆ ದಾಂಡೇಲಿಗೆ ಹೋಗಿದ್ದರು.‌ ಈ ಬಗ್ಗೆ ಮೊದಲಿಗೆ ನಮಗೆ ಮಾಹಿತಿ ಇರಲಿಲ್ಲ. ಪ್ರವಾಸಕ್ಕೆ ಹೋಗುವ ಸಮಯದಲ್ಲಿ ವಾಟ್ಸಪ್​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಆಗ ಅವರು ದಾಂಡೇಲಿಗೆ ಹೋಗಿರುವುದು ತಿಳಿಯಿತು. ಬಳಿಕ ನನ್ನ ಪತಿಗೆ ಮೃತ ನಜೀರ್ ಅಹಮ್ಮದ್ ಪತ್ನಿ ಕರೆ ಮಾಡಿ ಮಿಸ್ಸಿಂಗ್​ ಆಗಿರುವುದರ ಬಗ್ಗೆ ಹೇಳಿದರು. ಆಗ ಘಟನೆ ಬಗ್ಗೆ ಗೊತ್ತಾಯಿತು ಎಂದು ಮಾಹಿತಿ ನೀಡಿದರು. ಘಟನೆಯಲ್ಲಿ ನಜೀರ್ ಅಹಮ್ಮದ್ ಹೆಂಡತಿ ಸಲ್ಮಾ ಹಾಗೂ ಅತ್ತೆ ಬದುಕುಳಿದಿದ್ದಾರೆ.

Exit mobile version