ಮೈಸೂರು: ಬಿಜೆಪಿಯ ಕೆಲ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಬಿಜೆಪಿ ಸರಕಾರ ಮೇಲಿನ 40 ಪರ್ಸೆಂಟ್ ಆರೋಪದ ಬಗ್ಗೆ ಯಾಕೆ ದೂರು ಕೊಟ್ಟಿರಲಿಲ್ಲ. ಕೆಂಪಣ್ಣ ಅವರ ಬರೆದ ಪತ್ರ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಊರಿಗೆಲ್ಲ ತಮಟೆ ಹೊಡೆದರು. ಬಿಜೆಪಿ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ವಿರುದ್ದ ರೀ ಡೂ, ಅರ್ಕಾವತಿ ಡಿ ನೋಟಿಫೀಕೇಷ್, ಕೆಂಪಣ್ಣ ಆಯೋಗ ವರದಿ ಅಬ್ಬರಿಸುತ್ತಿದ್ದರು. ಆದರೆ ನಮ್ಮವರು ಒಂದು ದಿನವೂ ಹಾವಿನ ಪೆಟ್ಟಿಗೆಯಿಂದ ಹಾವು ಹೊರಗೆ ಬಿಡಲೇ ಇಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಕೂಡ ಬಿಜೆಪಿ ಮೇಲೆ ಪಿಎಸ್ಐ ಹಗರಣ, ಬಿಟ್ ಕಾಯಿನ್ ಎಂದು ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೆ ನಿಮ್ಮ ಮತ್ತು ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲವೆಂದರೆ ನೀವು ಮಾಡುತ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಬಿಜೆಪಿಯ ಕೆಲವು ಅತಿರಥ ಮಹಾರಥರು ಮಾತಾಡದೆ ಇರಬಹದು. ಕೆಲವರು ಶಾಮೀಲು ಆಗಿರಬಹುದು ಬಿಜೆಪಿ ಕಾರ್ಯಕರ್ತ ಯಾವತ್ತೂ ನಿಮ್ಮ ಜೊತೆ ಶಾಮೀಲು ಆಗಿಲ್ಲ. ಆಗುವುದೂ ಇಲ್ಲ ಎಂದು ಹೇಳಿದ್ದಾರೆ.