Site icon newsroomkannada.com

ಕುತ್ತಾರು ಕ್ಷೇತ್ರಕ್ಕೆ ಶ್ವೇತಾ ಚೆಂಗಪ್ಪ ಭೇಟಿ, ಉಡುಪಿಯಲ್ಲಿ ನೆಲಭೋಜನ ಹರಕೆ ತೀರಿಸಿದ ದಂಪತಿ

ಮಂಗಳೂರು: ಕನ್ನಡದ ಪ್ರತಿಭಾವಂತ ಟಿವಿ ನಿರೂಪಕಿ ಶ್ವೇತಾ ಚೆಂಗಪ್ಪಾ ಕರಾವಳಿಯ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂ 1 ಕಪಲ್ಸ್ ರಿಯಾಲಿಟಿ ಶೋದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಚೆಂಗಪ್ಪಾ ದೀಪಾವಳಿ ಹಿನ್ನೆಲೆಯಲ್ಲಿ ತನ್ನ ಫ್ಯಾಮಿಲಿ ಜೊತೆ ಕರಾವಳಿಯಾದ್ಯಂತ ದೇಗುಲ ದರ್ಶನ ಮಾಡಿದ್ದಾರೆ
ಮಂಗಳೂರು, ಉಡುಪಿಯಾದ್ಯಂತ ಕರಾವಳಿಯ ಪ್ರಸಿದ್ಧ ದೇವಾಲಯಗಳ ದರ್ಶನ ಮಾಡಿರುವ ಶ್ವೇತಾ ಚೆಂಗಪ್ಪಾ, ಈ ಕುರಿತಂತೆ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಬರೆದುಕೊಂಡಿದ್ದು, ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಮಂಗಳೂರಿನ ಹಲವಾರು ಪುಣ್ಯ ಕ್ಷೇತ್ರಗಳಿಗೆ ದೀಪಾವಳಿಯ ಸಮಯದಲ್ಲಿ ಕುಟುಂಬದವರೊಂದಿಗೆ ಭೇಟಿ ನೀಡಿದ ಕ್ಷಣಗಳು, ದೇವಸ್ಥಾನದಲ್ಲಿ ದೇವರ ದರ್ಶನ ಮನಸ್ಸಿಗೆ ನೆಮ್ಮದಿ ನೀಡಿತು, ಮಂಗಳೂರಿಗೆ ಸುಮಾರು ವರ್ಷಗಳ ನಂತರ ಹೋಗಿದ್ದು. ಮಂಗಳೂರಿನ ಜನತೆಯ ಪ್ರೀತಿಗೆ ನಾನು ಸದಾ ಆಭಾರಿ ಎಂದು ಶ್ವೇತಾ ಬರೆದುಕೊಂಡಿದ್ದಾರೆ.

ಶ್ವೇತಾ ತಮ್ಮ ಪತಿ ಕಿರಣ್ ಅಪ್ಪಚ್ಚು, ಮಗ ಜಿಯಾನ್ ಹಾಗೂ ತಂದೆ ಮತ್ತು ತಾಯಿಯರ ಜೊತೆ ಉಡುಪಿ ಕೃಷ್ಣ ಮಠ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಕದ್ರಿ ಮಂಜುನಾಥ ದೇವಾಲಯ, ಮಂಗಳಾದೇವಿ, ಸ್ವಾಮಿ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿದ್ದಾರೆ. ಉಡುಪಿ ಕೃಷ್ಣ ಮಠದಲ್ಲಿ ನೆಲಭೋಜನ ಹರಕೆಯನ್ನು ಸಹ ಶ್ವೇತಾ ಚೆಂಗಪ್ಪ ದಂಪತಿ ಪೂರ್ಣಗೊಳಿಸಿದ್ದಾರೆ. ಕಳೆದ ಬಾರಿ ವಶಿಷ್ಠ ಸಿಂಹ ಮತ್ತು ಹರಿಪ್ರಿಯ ದಂಪತಿ ಸಹ ಕೃಷ್ಣಮಠದಲ್ಲಿ ನೆಲಭೋಜನ ಹರಕೆ ತೀರಿಸಿದ್ದರು.
ಇನ್ನು ಮಂಗಳೂರಿನ ಕುತ್ತಾರಿನ ಕೊರಗಜ್ಜನ ಆದಿಕ್ಷೇತ್ರವು ತುಂಬಾನೆ ದೈವೀಕವಾದ ತಾಣವಾಗಿದ್ದು, ಸ್ಯಾಂಡಲ್ ವುಡ್ ನ ಹಲವಾರು ಸೆಲೆಬ್ರಿಟಿಗಳು ಭೇಟಿ ನೀಡಿದ್ದರು. ಇದೀಗ ಶ್ವೇತಾ ಸಹ ಅಜ್ಜನ ದರ್ಶನ ಪಡೆದಿದ್ದಾರೆ. ಮಡಿಕೇರಿಯವರಾದ ಶ್ವೇತಾ ಚೆಂಗಪ್ಪ, ಸದ್ಯ ಬೆಂಗಳೂರಿನಲ್ಲೇ ನೆಲೆಯೂರಿದ್ದಾರೆ. ಸೀರಿಯಲ್, ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸದ್ಯ ಬಹುಬೇಡಿಕೆಯದ ನಿರೂಪಕಿಯಾಗಿದ್ದಾರೆ

Exit mobile version