ಬೆಂಗಳೂರು: ವೈಟ್ ಫೀಲ್ಡ್ ಬಳಿ ಬ್ರೂಕ್ ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವ ನಿಗೂಢ ಸ್ಫೋಟಕ್ಕೆ (Rameshwaram Cafe Blast) ಸಂಬಂಧಿಸಿದಂತೆ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಸ್ಫೋಟಕ ಮಾಹಿತಿ ನೀಡಿದ್ದಾರೆ.
ದಿವ್ಯಾ ಅವರು, ಸಿಸಿಟಿವಿ (CCTV) ದೃಶ್ಯಗಳನ್ನು ಗಮನಿಸಿದ್ದೇನೆ. 10 ಸೆಕೆಂಡುಗಳಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಕೈತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲಿ ಯಾವುದೇ ಸಿಲಿಂಡರ್ ಇಟ್ಟಿರಲಿಲ್ಲ. ಅಲ್ಲದೇ ಕೆಫೆಯಲ್ಲಿಟ್ಟಿದ್ದ ಸಿಲಿಂಡರ್‌ಗಳು ಸೇಫ್ ಆಗಿದೆ. ಸ್ಫೋಟ ಸಂಭವಿಸಿದ ಜಾಗದಲ್ಲಿ ಉದ್ಯೋಗಿಯೊಬ್ಬರ ಐಡಿ ಕಾರ್ಡ್ ಪತ್ತೆಯಾಗಿದೆ. ಬ್ಯಾಟರಿ ಬೋಲ್ಟ್‌ಗಳು ಸಿಕ್ಕಿರೋದನ್ನ ಗಮನಿಸಿದ್ದೇನೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ನಮಗೆ ಸಿಕ್ಕ ಮಾಹಿತಿ ಪ್ರಕಾರ, ಯಾರೋ ಗ್ರಾಹಕರ ರೀತಿ ಬಂದು ಬ್ಯಾಗ್ ಇಟ್ಟು ಹೋಗಿದ್ದಾರೆ. ಆ ಬ್ಯಾಗ್‌ನಿಂದ ಬ್ಲಾಸ್ಟ್ ಆಗಿದೆ. ಆತ ಬಂದು ಹೋಗಿರುವ ನಿಖರವಾದ ಸಮಯದ ಬಗ್ಗೆ ಮಾಹಿತಿ ಇಲ್ಲ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟು 150ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಘಟನೆಯಲ್ಲಿ ಮೂವರು ಸಿಬ್ಬಂದಿ ಹಾಗೂ ಓರ್ವ ಗ್ರಾಹಕರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಕೆಲಸ ಮಾಡಿದ್ದೇವೆ. ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಒಟ್ಟಿನಲ್ಲಿ ಇದು ಸಿಲಿಂಡರ್‌ನಿಂದ ಸಂಭವಿಸಿರುವ ಬ್ಲಾಸ್ಟ್ ಅಲ್ಲ. ನಮ್ಮ ಸಿಲಿಂಡರ್‌ಗಳೆಲ್ಲವೂ ಸೇಫ್ ಆಗಿವೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ
ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದೆ. ಡಿಜಿಪಿ ಅಲೋಕ್ ಮೋಹನ್ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.