ಬಾ ನಲ್ಲೆ ಮಧುಚಂದ್ರಕ್ಕೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಅಗಲಿದ್ದಾರೆ. ಕಳೆದ 12 ದಿನಗಳಿಂದ ಸಂಪಂಗಿರಾಮ ನಗರದ ಹೆಚ್‌ಜಿಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಮ್ ಕೊನೆ ಉಸಿರೆಳೆದಿದ್ದಾರೆ.
ಶಿವರಾಮ್ ಸ್ಥಿತಿ ಗಂಭೀರವಾಗುತ್ತಿದೆ ಎಂದು ನಿನ್ನೆಯಿಂದ ಎಲ್ಲೆಡೆ ಸುದ್ದಿಯಾಗಿತ್ತು. ಶಿವರಾಮ್ ಅವರು ಕೆಲವು ದಿನಗಳ ಹಿಂದೆ ರಕ್ತದೊತ್ತಡದಲ್ಲಿ ಏರುಪೇರು ಉಂಟಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಆದಾದ ಬಳಿಕ ಇದೀಗ ಹೃದಯಾಘಾತಕ್ಕೆ ಒಳಗಾಗಿದ್ದು, ಅವರ ಮಿದುಳು ನಿಷ್ಕ್ರಿಯಗೊಂಡಿದೆ ಎನ್ನಲಾಗಿದ್ದು, ಆರೋಗ್ಯ ಸ್ಥಿತಿ ಸಂಕೀರ್ಣವಾಗಿದೆ ಎನ್ನಲಾಗಿದೆ. 71 ವರ್ಷದ ಶಿವರಾಮ್ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಕುಟುಂಬಸ್ಥರು ಪ್ರಾರ್ಥಿಸುತ್ತಿದ್ದರು.
ಶಿವರಾಮ್ ಹುಟ್ಟಿದ್ದು ಏಪ್ರಿಲ್ 6, 1953ರಲ್ಲಿ. ಮೂಲತಃ ರಾಮನಗರ ಜಿಲ್ಲೆ ಉರುಗಹಳ್ಳಿಯಲ್ಲಿ. ಶಿವರಾಮ್ ಮೂಲ ಹೆಸರು ಶಿವರಾಮು ಕೆಂಪಯ್ಯ. ಪತ್ನಿ ಹೆಸರು ವಾಣಿ ಶಿವರಾಮ್. ನಾಗತಿಹಳ್ಳಿ ಚಂದ್ರಶೇಖರ್ ನಿದೇಶನದ ‘ಬಾ ನಲ್ಲೆ ಮಧು ಚಂದ್ರಕೆ’ ಸಿನಿಮಾದಲ್ಲಿ ನಟಿಸಿ ಕೆ ಶಿವರಾಮು ಅವರು ಕರ್ನಾಟಕದ ಮನೆ ಮಾತಾಗಿದ್ದರು. ಯಾರಿಗೆ ಬೇಡ ದುಡ್ದ್ದುಡು, ಟೈಗರ್ ಮುಂತಾದ ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಭಕ್ತೇ ಕದಮ್, ಬೋಲೆ ಬೋಲೆ ಲಡಕಿ ಮುಂತಾದ ಹಿಂದಿ ಸಿನಿಮಾಗಳಲ್ಲಿ ಸಹ ನಟಿಸಿದ್ದರು.