Site icon newsroomkannada.com

ಗ್ಯಾರಂಟಿ ಯೋಜನೆ ಮುಂದಿಟ್ಟು . ಉಡುಪಿ, ದಕ್ಷಿಣ ಕನ್ನಡ ಲೋಕಸಭೆ ಗೆಲ್ಲಬೇಕು: ಕಾರ್ಯಕರ್ತರಿಗೆ ಡಿಕೆಶಿ ಟಾಸ್ಕ್‌

ಮಂಗಳೂರು: ರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ. ನಮ್ಮಲ್ಲೀಗ ಜಿಲ್ಲೆಯಲ್ಲಿ ಇಬ್ಬರು ಶಾಸಕರಿದ್ದಾರೆ. ಪ್ರತಿ ಬೂತನ್ನು ಗೆಲ್ಲುವ ಶಪಥ ಮಾಡಿ, ಅಭ್ಯರ್ಥಿ ಯಾರೆಂದು ಚಿಂತೆಯೇ ಬೇಡ. ಗ್ಯಾರಂಟಿ ಯೋಜನೆ ಮುಂದಿಟ್ಟು ಮತದಾರರ ಮನಸ್ಸು ಗೆಲ್ಲಬೇಕು. ಉಡುಪಿ, ಮಂಗಳೂರು ಲೋಕಸಭೆ ಗೆಲ್ಲುವುದೇ ನಮ್ಮ ಗುರಿಯಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಕಾರ್ಯಕರ್ತರಿಗೆ ಟಾಸ್ಕ್ ನೀಡಿದ್ದಾರೆ.

ಮಲ್ಲಿಕಟ್ಟೆಯ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಡಿಕೆಶಿ, ಲೋಕಸಭೆ ಗೆಲ್ಲುವುದಕ್ಕೆ ಶ್ರಮ ಹಾಕಲು ಏನೇನು ಆಗಬೇಕು ಅವೆಲ್ಲವನ್ನೂ ಮಾಡಿಕೊಡುತ್ತೇವೆ, ಕಾರ್ಯಕರ್ತರು ಮುನ್ನುಗ್ಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ನಾವು ಪ್ರತಿ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಮತ್ತು ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಪ್ರತ್ಯೇಕ ಕಮಿಟಿಯೊಂದನ್ನು ಮಾಡುತ್ತೇವೆ. ಇದಕ್ಕೆ ಜಿಲ್ಲಾ ಮಟ್ಟದಲ್ಲಿ 20 ಜನರು ಸಮಿತಿಯಲ್ಲಿರುತ್ತಾರೆ. ವಿಧಾನಸಭೆ ಕ್ಷೇತ್ರದಲ್ಲಿ 25 ಜನರು ಇರುತ್ತಾರೆ. ಪಕ್ಷದಲ್ಲಿ ಕೆಲಸ ಮಾಡುವವರಿಗೆ ಈ ಸಮಿತಿಯಲ್ಲಿ ಸ್ಥಾನ ಕೊಡಿಸುತ್ತೇವೆ. ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಕಚೇರಿ ಮಾಡುವುದಕ್ಕೆ ಮತ್ತು ಸಮಿತಿ ಅಧ್ಯಕ್ಷರಾದವರಿಗೆ ಸಂಭಾವನೆ ಕೊಡುತ್ತೇವೆ ಎಂದು ಹೇಳಿದರು.
ರಾಜಕೀಯದಲ್ಲಿ ಆಗೋದು ಇಲ್ಲ ಅನ್ನುವ ಪದವನ್ನೇ ತೆಗೆದುಹಾಕಿ. ಮಂಗಳೂರು ಕ್ಷೇತ್ರವನ್ನೂ ಗೆಲ್ಲಬಹುದು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಐದಕ್ಕೆ ಐದು ಗೆದ್ದಿಲ್ಲವಾ.. ಕೊಡಗಿನಲ್ಲಿ ಎರಡು ಸೀಟು ಗೆದ್ದಿಲ್ಲವಾ.. ಅಲ್ಲಿಯೂ ನಾಲೈದು ಬಾರಿ ಸೋತಿದ್ದೇವೆ. ಈಗ ಜನರೇ ಗೆಲುವು ಕೊಟ್ಟಿದ್ದಾರೆ. ಮತದಾರರು ಏನನ್ನೂ ತೀರ್ಪು ಕೊಡುತ್ತಾರೆ. ನಮ್ಮಲ್ಲೀಗ ಅದ್ಭುತ ಗ್ಯಾರಂಟಿ ಯೋಜನೆಯ ಅವಕಾಶ ಇದೆ. ಸುಮ್ಮೇ ಅಲ್ಲ ವರ್ಷಕ್ಕೆ 60 ಸಾವಿರ ಕೋಟಿ ಖರ್ಚು ಮಾಡಿ ಜನರಿಗೆ ನೀಡುತ್ತಿದ್ದೇವೆ. ಅದನ್ನು ಮತವಾಗಿ ಪರಿವರ್ತನೆ ಮಾಡಲೇಬೇಕು. ನನಗೆ ರಿಸಲ್ಟ್ ಬೇಕು ಅಷ್ಟೇ. ಪ್ರತಿ ಬೂತಿನಲ್ಲೂ ಸಮರ್ಥ ನಾಯಕ ಬೇಕು, ಪಕ್ಷವನ್ನು ಗೆಲ್ಲಿಸುವ ಕೆಲಸ ಆಗಬೇಕು. ಬೂತ್ ಗೆದ್ದಲ್ಲಿ ಪಕ್ಷ ಗೆಲ್ಲುತ್ತದೆ. ಕಾರ್ಯಕರ್ತರ ಸಭೆಗೆ ಎರಡು ಲಕ್ಷ ಜನರು ಸೇರಿಸುವ ಕೆಲಸ ಆಗಬೇಕು. ಯಾಕೆ ಆಗಲ್ಯ ನನಗೆ ಬೆಂಗಳೂರಿನಲ್ಲಿ 2-3 ಲಕ್ಷ ಜನರನ್ನು ಸೇರಿಸುವುದು ಕಷ್ಟವಾಗಲ್ಲ. ಆದರೆ ಕರಾವಳಿ ಭಾಗದಲ್ಲಿ ಅಂತಹ ಸಭೆ ಆಗಬೇಕು ಅನ್ನೋದು ನಮ್ಮ ಗುರಿ. ಇದಕ್ಕಾಗಿ ಪಕ್ಷದ ನಾಯಕರು, ಕಾರ್ಯಕರ್ತರು ಶ್ರಮ ಹಾಕಬೇಕು ಎಂದು ಹೇಳಿದರು. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ರೋಝಿ ಜಾನ್, ನಿಕೇತ್ ರಾಜ್ ಮೌರ್ಯ, ಹರೀಶ್ ಕುಮಾರ್, ರಮಾನಾಥ ರೈ ಮಂಜುನಾಥ ಭಂಡಾರಿ, ಶಾಸಕ ಅಶೋಕ್ ಕುಮಾರ್ ರೈ, ವಿನಯ ಕುಮಾರ್ ಸೊರಕೆ, ಕಣಚೂರು ಮೋನು, ಶಕುಂತಳಾ ಶೆಟ್ಟಿ, ಮಿಥುನ್ ರೈ, ಐವಾನ್ ಡಿಸೋಜ, ಪದ್ಮರಾಜ್, ಅಭಯಚಂದ್ರ ಜೈನ್, ಮಮತಾ ಗಟ್ಟಿ ಮತ್ತಿತರರಿದ್ದರು

Exit mobile version