ಬಾಲಿವುಡ್‌ನ ಜನಪ್ರಿಯ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಇಂದು ( ನ. 22)ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇದಾಗಲೇ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ನಡುವೆ ಹೇಗೆ ಪ್ರೀತಿ ಬೆಳೆಯಿತು ಎಂಬುದೇ ಹಲವರ ಅಚ್ಚರಿಯ ಪ್ರಶ್ನೆ. ಏಕೆಂದರೆ, ಶಿಲ್ಪಾ ಬಾಲಿವುಡ್ನಲ್ಲಿ ಮಿಂಚುತ್ತಿದ್ದ ಸಂದರ್ಭದಲ್ಲಿ, ಅದಾಗಲೇ ಮದ್ವೆಯಾಗಿದ್ದ ರಾಜ್ ಕುಂದ್ರಾ ಬಲೆಗೆ ಹೇಗೆ ಬಿದ್ದರು ಎಂದು ಹಲವರು ತಲೆ ಕೆಡಿಸಿಕೊಂಡಿರುವುದು ಇದೆ. ಹಳೆಯ ಸಂದರ್ಶನವೊಂದರಲ್ಲಿ ನಟಿ ಶಿಲ್ಪಾ ಈ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿದ್ದರು.
ಕುಂದ್ರಾ ಅವರನ್ನು ಪ್ರೀತಿಸುವ ಮೊದಲು ಶಿಲ್ಪಾ ಬಿಗ್ ಬ್ರದರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ರಾಜ್ ಕುಂದ್ರಾ ಅವರು ಇವರ ಫ್ಯಾನ್ ಆಗಿದ್ದರು. ಈ ಮಾತುಕತೆ ಸ್ನೇಹಕ್ಕೆ ತಿರುಗಿತ್ತು. ಅದಾದ ಬಳಿಕ ತಮ್ಮ ಬ್ರ್ಯಾಂಡ್ವೊಂದರ ಪ್ರಮೋಷನ್ಗಾಗಿ ಶಿಲ್ಪಾ ಅವರು ರಾಜ್ ಕುಂದ್ರಾ ಜೊತೆ ಬ್ಯುಸಿನೆಸ್ನಲ್ಲಿ ಕೈ ಜೋಡಿಸಿದ್ದರು. ಆಗಲೇ ಅವರಿಬ್ಬರಿಗೂ ಪರಿಚಯ ಬೆಳೆಯಿತು. ರಾಜ್ ಅವರು ವಿವಾಹಿತರಾಗಿರುವುದು ಗೊತ್ತಿದ್ದರೂ ಶಿಲ್ಪಾ ಅವರ ಒಲವು ರಾಜ್ ಕಡೆ ನೆಟ್ಟಿತು. ಈ ತಮ್ಮ ಮೊದಲ ಭೇಟಿ ಕಾಮಭರಿತವಾಗಿತ್ತು ಎಂದಿದ್ದಾರೆ ಶಿಲ್ಪಾ. ಇವರಿಬ್ಬರ ನಡುವೆ ಅನ್ಯೋನ್ಯತೆ ಬೆಳೆಯುತ್ತಲೇ ತಮ್ಮ ಹೆಂಡತಿಗೆ ರಾಜ್ ವಿಚ್ಛೇದನ ನೀಡುವ ನಿರ್ಧಾರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ರಾಜ್ ಬ್ರಿಟನ್ನಲ್ಲಿ ನೆಲೆಸಿದ್ದರು. ಅಲ್ಲಿಯೂ ರಾಜ್ ಭಾರತೀಯನಾಗಿ ಹೆಮ್ಮೆಪಡುತ್ತಿದ್ದರು.
ಅವರು ಮನಸ್ಸು ಮಾಡಿದ್ದರೆ ಅಲ್ಲಿಯೇ ವಾಸಿಸುತ್ತಿರಬಹುದು, ಆದರೆ ಅವರು ಹೃದಯದಿಂದ ಭಾರತೀಯರಾಗಿದ್ದರು. ಭಾರತಕ್ಕೆ ಬಂದು ನೆಲೆಸುವ ಮನಸ್ಸು ಮಾಡಿದ್ದರು. ಅದು ನನಗೆ ತುಂಬಾ ಹಿಡಿಸಿತು. ಅವರಲ್ಲಿ ಏನೋ ಆಕರ್ಷಕ ವ್ಯಕ್ತಿತ್ವ ಕಂಡುಕೊಂಡೆ. ಅದು ಪ್ರೀತಿಯಾಗಿ ಅರಳಿ, ಕಾಮಪ್ರಚೋದಕವಾಯಿತು ಎಂದಿದ್ದಾರೆ ಶಿಲ್ಪಾ.
ಇಬ್ಬರೂ ಪರಸ್ಪರ ಪ್ರೀತಿ ಹಂಚಿಕೊಂಡ ಮೇಲೆ ಡೇಟಿಂಗ್ ಶುರು ಮಾಡಿದರು. ಇದೇ ವೇಳೆಗೆ ಶಿಲ್ಪಾಗೆ ದುಬಾರಿ ಗಿಫ್ಟ್ಗಳನ್ನು ನೀಡುವ ಮೂಲಕ ರಾಜ್ ಇಂಪ್ರೆಸ್ ಮಾಡುತ್ತಿದ್ದರು. ಸೆಲೆಬ್ರಿಟಿಗಳ ಇಂಥ ಸುದ್ದಿಗಳು ಬಹುಬೇಗನೆ ಸದ್ದು ಮಾಡುತ್ತವೆ. ಅದರಂತೆಯೇ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಬಗ್ಗೆಯೂ ಸಾಕಷ್ಟು ಸುದ್ದಿಯಾದರೂ ಅದನ್ನು ಆ ಕ್ಷಣದಲ್ಲಿ ಅವರು ಒಪ್ಪಿಕೊಳ್ಳಲಿಲ್ಲ. ಏಕೆಂದರೆ ರಾಜ್ ಕುಂದ್ರಾ ಆಗ ವಿವಾಹಿತರಾಗಿದ್ದರು! ಇಂಗ್ಲೆಂಡ್ನ ರೆಸ್ಟೋರೆಂಟ್ವೊಂದರಲ್ಲಿ ರಾಜ್ ತುಂಬ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದರು. ಡೈಮಂಡ್ ರಿಂಗ್ ನೀಡಿ ಪ್ರೇಮ ನಿವೇದನೆ ಮಾಡಿಕೊಂಡರು. ಶಿಲ್ಪಾ ಒಪ್ಪಿಗೆ ಸೂಚಿಸಿದರು. ಆದರೆ ನಂತರದ ದಿನಗಳಲ್ಲಿ ರಾಜ್ ಮೊದಲ ಪತ್ನಿ ಕವಿತಾ ಕುಂದ್ರಾ ಕೆಲವು ಆರೋಪಗಳನ್ನು ಮಾಡಿದರು. ತಮ್ಮ ಮದುವೆ ಮುರಿದು ಬೀಳಲು ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಹೇಳಿದರು. ಆದರೆ ಆ ಆರೋಪಗಳನ್ನೆಲ್ಲ ರಾಜ್ ತಳ್ಳಿ ಹಾಕಿ ಎಲ್ಲಾ ಏರಿಳಿತದ ಮಧ್ಯೆ ದಾಂಪತ್ಯ ಜೀವನವನ್ನು ಚೆನ್ನಾಗಿ ಮುಂದುವರಿಸುತ್ತಾ ಹೋಗುತ್ತಿದ್ದಾರೆ.