ಮಂಗಳೂರು: ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ 4 ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ನಮ್ಮ ಕುಟುಂಬಕ್ಕೆ ಪರಿಹಾರ ಒದಗಿಸಿಲ್ಲ ಎಂದು ಹತ್ಯೆಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಹೇಳಿದ್ದು, ನಮ್ಮ ಕುಟುಂಬಕ್ಕೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತನಿಯಪ್ಪ ಮಡಿವಾಳ ಪರಿಹಾರ ನೀಡುವಲ್ಲಿಯೂ ರಾಜ್ಯ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಹೇಳಿದ್ದಾರೆ.
2017 ರ ಜುಲೈ 7 ರಂದು ಶರತ್ ಮಡಿವಾಳ ಹತ್ಯೆ ನಡೆದಿತ್ತು. ಬಂಟ್ವಾಳ ದ ಬಿ.ಸಿ ರೋಡ್‌ನಲ್ಲಿ ಶರತ್ ಮಡಿವಾಳ ಉದಯ ಲಾಂಡ್ರಿ ಹೆಸರಿನ ಅಂಗಡಿ ಹೊಂದಿದ್ದರು. 2017 ರ ಜುಲೈ 7 ರಂದು ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುವ ಸಂದರ್ಭದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಮಂಗಳೂರಿನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜುಲೈ ,7 ರಂದು ಶರತ್ ಕೊನೆಯುಸಿರೆಳಿದಿದ್ದರು.
ಇಂದಿಗೂ ಮಗನ ಸಾವಿಗೆ ನ್ಯಾಯ ದೊರೆತಿಲ್ಲ ಎಂದು ಶರತ್ ತಂದೆ ತನಿಯಪ್ಪ ಮಡಿವಾಳ ಕೊರಗುತ್ತಿದ್ದಾರೆ. ಇಂದಿಗೂ ಅದೇ ಲಾಂಡ್ರಿಯಲ್ಲಿ 74 ವರ್ಷದ ತನಿಯಪ್ಪ ದುಡಿಮೆ ಮಾಡುತ್ತಿದ್ದು ತಮಗೆ ಇದುವರೆಗೆ ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ವಾಗಲಿ ಇದುವರೆಗೆ ಒಂದು ರೂಪಾಯಿ ಪರಿಹಾರ ನೀಡಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಸರ್ಕಾರದ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಸಮಸ್ಯೆಗಳಿಗೆ ಕಷ್ಟಕ್ಕೆ ಯಾವ ಸರ್ಕಾರವೂ ಸ್ಪಂದಿಸಿಲ್ಲ. ನನ್ನ ಮಗನ ಪ್ರಕರಣ ದಲ್ಲಿ ಸರಿಯಾಗಿ ತನಿಖೆ ಆಗಿಲ್ಲ . ಈ ಪ್ರಕರಣದ ತನಿಖೆಯನ್ನು ಎನ್ ಐ ಎ ಗೆ ಅಥವಾ ಸಿ ಬಿ ಐ ಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರ ಕುಟುಂಬಕ್ಕೆ ಈ ಕೂಡಲೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.