ಬಂಟ್ವಾಳ: ಸಜೀಪ ಮೂಡ ಗ್ರಾಮದ ಬೇಂಕ್ಯದಲ್ಲಿ ಸುಭಾಷ್ ಯುವಕ ಮಂಡಲದ ವತಿಯಿಂದ 97ನೇ ವರ್ಷದ ಶಾರದಾ ಪೂಜಾ ಮಹೋತ್ಸವ ಪ್ರಯುಕ್ತ ಪ್ರತೀದಿನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ.
ಇದರಂಗವಾಗಿ ನಿನ್ನೆ (ಅ.21) ರಾತ್ರಿ ತೆಲಿಕೆದ ಬೊಳ್ಳಿ ಎಂದೇ ಖ್ಯಾತರಾಗಿರುವ ಡಾ. ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಚಾ ಪರ್ಕ’ ಕಲಾವಿದರು ಅರ್ಪಿಸುವ ‘ಪುದರ್ ದೀದಾಂಡ್’ ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭ ಸಂಘದ ಸರ್ವರ ಪರವಾಗಿ ತುಳು ರಂಗಭೂಮಿಯ ತ್ರಿವಳಿ ರತ್ನಗಳಾದ ಡಾ. ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಬೋಜರಾಜ್ ವಾಮಂಜೂರು ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಡಾ. ದೇವದಾಸ್ ಕಾಪಿಕಾಡ್, ‘ನಾನು ಹುಟ್ಟಿ ಬೆಳೆದ ಊರು ಇದು, ಈ ಗ್ರಾಮದ ದೈವದ ಗಂಧ ಪ್ರಸಾದದಿಂದ ಇವತ್ತು ರಂಗಭೂಮಿಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕೆ ಹೇಳೋದು ಸಜಿಪದ ಮಣ್ಣಿನ ಪವರ್, ನಾನು ಹುಟ್ಟಿದ ಮಣ್ಣಿನಲ್ಲಿ ನೀವು ನೀಡಿದ ಸನ್ಮಾನ ಇದು ರಾಷ್ಟ್ರ ಮಟ್ಟಕ್ಕಿಂತಲೂ ದೊಡ್ಡ ಸನ್ಮಾನ ನನ್ನ ಜನ್ಮ ಸಾರ್ಥಕ ಆಯ್ತು ಇನ್ನೊಂದು ಜನ್ಮ ಇದ್ರೆ ಸಜೀಪ ಮಣ್ಣಿನಲ್ಲೇ ಹುಟ್ಟಿ ಬರುವೆ..’ ಎಂದು ಹೇಳಿದರು.
ಈ ಸಂದರ್ಭ ವೇದಿಕೆಯಲ್ಲಿ ನವರಸ ರಾಜ ಬೋಜರಾಜ್ ವಾಮಂಜೂರು, ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಸುಭಾಷ್ ಯುವಕ ಮಂಡಲ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ, ಯುವಕ ಮಂಡಲದ ಪ್ರಮುಖರು ಹಾಗೂ ಸಜೀಪ ಮೂಡ ಗ್ರಾ.ಪಂ ಮಾಜೀ ಅಧ್ಯಕ್ಷರಾದ ಶ್ರೀದೇವಿ ಪ್ರಸಾದ್ ಪೂಂಜ, ಕೀರ್ತನ್ ಆಳ್ವಾ ಕಾಂತಾಡಿಗುತ್ತು, ರಾಮ್ ಪ್ರಸಾದ್ ಪೂಂಜಾ ಬರಂಗರೆ, ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾದ ವಸಂತ್ ಕುಮಾರ್ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.