ಕಾರವಾರ: ವಿವಾಹಿತ ಮಹಿಳೆಯೊಬ್ಬರಿಗೆ ಸಂಗೀತ ಕ್ಷೇತ್ರದಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡದ್ದು ಮಾತ್ರವಲ್ಲದೇ ಆಕೆಯ ನಗ್ನ ಚಿತ್ರ ಸೆರೆಹಿಡಿದು ಹಲವರಿಗೆ ಶೇರ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂಬಾತನನ್ನು ಕಾರವಾರ ಪೋಲಿಸರು ಬಂಧಿಸಿದ್ದಾರೆ.
ಪ್ರಕರಣದ ಪೂರ್ತಿ ವಿವರ :
ದೂರುದಾರ ಮಹಿಳೆಯು ವಿವಾಹಿತೆ ಆಗಿದ್ದು ಸಂಗೀತದಲ್ಲಿ ಆಸಕ್ತಿಇದ್ದು ‘ಕ್ಲಬ್ ಹೌಸ್’ ಅಪ್ಲಿಕೇಷನ್ ನಲ್ಲಿ ಆಗಾಗ ಹಾಡುತ್ತಿದ್ದರು. ಇದೇ ಕ್ಲಬ್ ಹೌಸ್ ಅಪ್ಲಿಕೇಶನ್ ಮೂಲಕ ಈ ಮಹಿಳೆಗೆ ಮೂರು ವರ್ಷಗಳ ಹಿಂದೆ 35 ವರ್ಷ ವಯಸ್ಸಿನ ಪುತ್ತೂರು ತಾಲೂಕಿನ ಅರ್ಲಪದವಿನ ಪ್ರಶಾಂತ ಭಟ್ ಮಾಣಿಲ ಎಂಬಾತನ ಪರಿಚಯವಾಗಿತ್ತು.
ವಿವಾಹಿತನಾಗಿರುವ ಮತ್ತು ಒಂದು ಹೆಣ್ಣು ಮಗುವಿನ ತಂದೆಯಾಗಿರುವ ಪ್ರಶಾಂತ್ ಭಟ್ ಮಾಣಿಲಾ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇವರ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಈ ದಂಪತಿ ನಡುವೆ ಡೈವೊರ್ಸ್ ಉಂಟಾಗಿತ್ತು.
ಈ ನಡುವೆ ಪ್ರಶಾಂತ್ ಭಟ್ ಮತ್ತು ಈ ವಿವಾಹಿತ ಮಹಿಳೆ ಕ್ಲಬ್ ಹೌಸ್ ಆ್ಯಪ್ನಲ್ಲಿ ಚಾಟ್ ಮಾಡುತ್ತಾ ಇದ್ದವರು, ನಂತರ ಫೇಸ್ ಬುಕ್ ನಲ್ಲಿ ಇನ್ನಷ್ಟು ಹತ್ತಿರವಾಗಿದ್ದರು.
ಕ್ರಮೇಣ ಇವರಿಬ್ಬರ ಮಧ್ಯೆ ಪ್ರೀತಿಯುಂಟಾಗಿದೆ. ಆರೋಪಿಯು ದೂರುದಾರಳಿಗೆ, ‘ನಿನಗೆ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ’ ಹೇಳಿ ಆಸೆ ಹುಟ್ಟಿಸಿ, ನಂತರ 2023ರ ಫೆಬ್ರವರಿಯಲ್ಲಿ ಶಿರಸಿಯ ಖಾಸಗಿ ಲಾಡ್ಜ್ ಗೆ ಆರೋಪಿಯು ದೂರುದಾರಳನ್ನು ಕರೆದುಕೊಂಡು ಹೋಗಿ, ಅಲ್ಲಿ ದೂರುದಾರಳ ಮೇಲೆ ಬಲಾತ್ಕಾರದಿಂದ ಲೈಂಗಿಕ ಸಂಪರ್ಕ ಸಾಧಿಸಿದ್ದು ಮಾತ್ರವಲ್ಲದೇ ಈ ವೈಯಕ್ತಿಕ ಕ್ಷಣಗಳ ಫೊಟೋಗಳನ್ನೂ ಸಹ ತೆಗೆದಿಟ್ಟುಕೊಂಡಿದ್ದ ಎಂಬ ಆರೋಪ ಇದೀಗ ಸಂತ್ರಸ್ತೆಯ ಕಡೆಯಿಂದ ಕೇಳಿಬಂದಿದೆ.
ಬಳಿಕ, ಪ್ರಶಾಂತ್ ಭಟ್ ತಮ್ಮಿಬ್ಬರ ರಸಮಯ ಕ್ಷಣಗಳ ಈ ಫೊಟೋಗಳನ್ನಿಟ್ಟುಕೊಂಡು ಆ ಮಹಿಳೆಯನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ. ಆರೋಪಿಯ ಕಿರುಕುಳ ತಾಳಲಾರದ ಸಂತ್ರಸ್ತೆ ಧೈರ್ಯ ಮಾಡಿ ಈ ವಿಷಯವನ್ನು ತನ್ನ ಗಂಡನಿಗೆ ತಿಳಿಸಿ 25,000 ರೂಪಾಯಿಗಳನ್ನು ಆರೋಪಿಗೆ ಗೂಗಲ್ ಪೇ ಮಾಡಿಸಿ ಕೈ ತೊಳೆದುಕೊಳ್ಳಲು ನೋಡಿದ್ದಾರೆ. ಆದರೆ ಈ ಹಣದಿಂದ ತೃಪ್ತನಾಗದ ಆರೋಪಿ ತನ್ನ ಬ್ಲ್ಯಾಕ್ ಮೇಲ್ ಮುಂದುವರೆಸಿದ್ದಾನೆ.
ಇಷ್ಟಕ್ಕೆ ತೃಪ್ತನಾಗದ ಆರೋಪಿ, ಸಂತ್ರಸ್ತೆಯ ಪತಿಯಲ್ಲೂ 7 ಲಕ್ಷರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಆರೊಪವೂ ಇದೀಗ ಕೇಳಿಬಂದಿದೆ. ಇದರಿಂದೆಲ್ಲಾ ನೊಂದ ಸಂತ್ರಸ್ತ ಮಹಿಳೆ ಮತ್ತು ಮನೆಯವರಲ್ಲಿ ಈ ಬಗ್ಗೆ ಚರ್ಚಿಸಿ ಪೋಲಿಸ್ ದೂರು ನೀಡಲು ನಿರ್ಧರಿಸಿದ್ದಾರೆ.
ಸದ್ಯ ಪ್ರಶಾಂತ ಭಟ್ ವಿರುದ್ಧ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 ಮತ್ತು IT Act 2008ರ 67(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಸಂತ್ರಸ್ತೆಯ ದೂರಿಗೆ ಸ್ಪಂದಿಸಿದ ಕಾರವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಶಾಂತ್ ಭಟ್ ಮಾಣಿಲನನ್ನು ಬಂಧಿಸಿದ್ದಾರೆ.