ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ಪ್ರತಿಭಟಿಸಿ ನಾಳೆ (ಸೆ.29) ನಡೆಯಲಿರುವ ಕರ್ನಾಟಕ ಬಂದ್ ಕರಾವಳಿಯ ಜನಜೀವನದ ಮೇಲೆ ಪರಿಣಾಮ ಬೀರಲಿಕ್ಕಿಲ್ಲ ಎನ್ನಲಾಗಿದೆ. ಬಂದ್ ಇದ್ದರೂ ಬಸ್‌ಗಳು ಎಂದಿನಂತೆ ಓಡಾಡಲಿವೆ ಎಂದು ಬಸ್ ಮಾಲಕರ ಸಂಘ ಹೇಳಿದೆ.
ಬಂದ್‌ಗೆ ನಮ್ಮ ನೈತಿಕ ಬೆಂಬಲ ಇದೆ. ಆದರೆ, ನಾವು ಬಸ್ ಓಡಿಸುತ್ತೇವೆ ಎಂದು ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಉಳಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೂ ಬಂದ್ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ವ್ಯಾಪಾರಿಗಳು ಬಂದ್ ಕುರಿತಂತೆ ಯಾವುದೇ ಹೇಳಿಕೆ ನೀಡದಿದ್ದರೂ ಸಾಮಾನ್ಯವಾಗಿ ಇಂಥ ಬಂದ್‌ಗಳ ಸಂದರ್ಭದಲ್ಲಿ ಜನಜೀವನ ಸಾಮಾನ್ಯವಾಗಿರುತ್ತದೆ. ಈ ನಡುವೆ ಬಂದ್ ಯಶಸ್ವಿಗೊಳಿಸಲು ಕನ್ನಡ ಪರ ಸಂಘಟನೆಗಳು ವಿವಿಧ ಸಂಘಟನೆಗಳ ಬೆಂಬಲ ಕೋರಿವೆ.
ಬಂದ್‌ಗೆ ಕರೆ ನೀಡಿರುವ ಕನ್ನಡ ಒಕ್ಕೂಟದ ವಿವಿಧ ಮುಖಂಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಂದ್‌ಗೆ ಬೆಂಬಲ ಕೋರಿದರು. ಕೆಎಫ್‌ಸಿಸಿ ಅಧ್ಯಕ್ಷ ಎನ್‌ಎಂ ಸುರೇಶ್ ಬಂದ್‌ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ಮತ್ತು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಲನಚಿತ್ರಗಳ ಪ್ರದರ್ಶನ ಇತ್ಯಾದಿಗಳನ್ನು ನಾಳೆ ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಬಂದ್ ಅಂಗವಾಗಿ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಸ್ಟಾರ್ ನಟರು ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಸಂಘಗಳು ಸಹ ಬಂದ್ ಗೆ ಬೆಂಬಲ ನೀಡಿವೆ, ಆದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಪರಿಸ್ಥಿತಿಯನ್ನು ಅವಲೋಕಿಸಿ ಇಂದು ಸಂಜೆಯೊಳಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಉದ್ಯಮ ಸಂಸ್ಥೆಗಳು ಮತ್ತು ಹೋಟೆಲ್ ಸಂಘಗಳು ಇನ್ನೂ ಬಂದ್ ಕರೆ ಬಗ್ಗೆ ನಿರ್ಧರಿಸಿಲ್ಲ.
ನಾಳೆ ಬೆಳಗ್ಗೆ 10.30ಕ್ಕೆ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದ್ದು ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಬಂದ್ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.