Site icon newsroomkannada.com

ಶಾಲೆಯಲ್ಲಿ ಧರ್ಮ ಅವಹೇಳನ ಆರೋಪ- ಮೀಡಿಯಾಗೆ ಹೇಳಿಕೆ ಕೊಟ್ಟ ಶಿಕ್ಷಕಿಗೆ ವಿದೇಶದಿಂದ ಜೀವ ಬೆದರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಸಂತ ಜೆರೋಸಾ ಶಾಲೆಯ (St. Gerosa School, Mangaluru) ಶಿಕ್ಷಕಿ ಸಿಸ್ಟರ್ ಪ್ರಭಾ ಅವರು ಶ್ರೀರಾಮನಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಆಡಿಯೋ ಮಾಡಿದ ಪೋಷಕಿಗೆ ಇವರೇ ಎಂದು ಮಹಿಳೆಯ ಕುಟುಂಬ ಸಹಿತ ಫೋಟೋವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ನಂತರ ವಿದೇಶದಿಂದ ನಿರಂತರವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಜೆರೋಸಾ ಶಾಲೆಯ ಶಿಕ್ಷಕಿ ಧರ್ಮ ಅವಹೇಳನ ಪ್ರಕರಣ ಸಂಬಂಧ ಶಿಕ್ಷಕಿ ವಿರುದ್ಧ ಆಡಿಯೋ ವೈರಲ್ ಮಾಡಿದ್ದು ಇವರೇ ಎಂದು ಹೇಳಿ ಮಂಗಳೂರಿನ ಗರೋಡಿ‌ ನಿವಾಸಿ ಕವಿತಾ ಅವರ ಕುಟುಂಬದ ಫೋಟೋದ ಜೊತೆಗೆ ಕವಿತಾರ ನಂಬರ್​ ಕೂಡ ವೈರಲ್ ಮಾಡಿದ್ದಾರೆ. ಇದರ ಜೊತೆಗೆ ವಿದೇಶದಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಗೆ‌ ಕವಿತಾ ಅವರು ದೂರು ನೀಡಿದ್ದಾರೆ.

ಕವಿತಾ ಅವರ ಮಗಳು ಜೆರೋಸಾ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಸಿಸ್ಟರ್ ಪ್ರಭಾ ವಿರುದ್ಧ ಪೋಷಕರ ಪ್ರತಿಭಟನೆಯಲ್ಲೂ ಭಾಗವಹಿಸಿದ್ದಳು. ಈ ನಡುವೆ, ಜೆರೋಸಾ ಶಿಕ್ಷಕಿ ಆಡಿಯೋ ವೈರಲ್ ಮಾಡಿದ್ದು ಕವಿತಾ ಅಂತ ಆರೋಪಿಸಿ ಬೆದರಿಕೆ ಹಾಕಲಾಗುತ್ತಿದೆ. ಕತಾರ್, ದುಬೈ, ಸೌದಿ ಸೇರಿ ಹಲವೆಡೆಯಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಅವಾಚ್ಯವಾಗಿ ನಿಂದಿಸಿ ವಾಟ್ಸ್​ಆ್ಯಪ್​ಗೆ ಅಶ್ಲೀಲವಾದ ಆಡಿಯೋ ಸಂದೇಶ ಕಳುಹಿಸಲಾಗುತ್ತಿದೆ.
ಕೆಲವು ವಾಟ್ಸ್​ಆ್ಯಪ್​ ಗ್ರೂಪ್​ಗೆ ಕವಿತಾ ಅವರ ನಂಬರ್ ಸೇರಿಸಿ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆಡಿಯೋ ವೈರಲ್ ಮಾಡುತ್ತೀಯಾ ಅಂತ ನಿರಂತರ ಬೆದರಿಕೆ ಕರೆ ಮಾಡಲಾಗಿದೆ. ಆದರೆ ವೈರಲ್ ಆಗಿರುವ ಆಡಿಯೋ ತನ್ನದಲ್ಲದಿದ್ದರೂ ನಿರಂತರ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿ ಕವಿತಾ ಅವರು ಬೆದರಿಕೆ ಆಡಿಯೋ, ವಾಟ್ಸ್​ಆ್ಯಪ್ ಸ್ಕ್ರೀನ್ ಶಾಟ್​ಗಳ ಸಹಿತ ಕಂಕನಾಡಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version